ಯುರೋಪಿನ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಸೈಬರ್ ದಾಳಿ: ಹಾರಾಟದಲ್ಲಿ ವ್ಯತ್ಯಯ, ಪ್ರಯಾಣಿಕರಿಗೆ ಸಂಕಷ್ಟ

ಲಂಡನ್: ಶನಿವಾರ ನಡೆದ ಭಾರೀ ಸೈಬರ್ ದಾಳಿಯಿಂದ ಯುರೋಪಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಗೆ ಗಂಭೀರ ಅಡಚಣೆ ಉಂಟಾಯಿತು. ಲಂಡನ್ ನ ಹೀಥ್ರೂ, ಬ್ರಸೆಲ್ಸ್ ಮತ್ತು ಬರ್ಲಿನ್ ವಿಮಾನ ನಿಲ್ದಾಣಗಳಲ್ಲಿ ಚೆಕ್-ಇನ್ ಹಾಗೂ ಬೋರ್ಡಿಂಗ್ ವ್ಯವಸ್ಥೆಗಳು ಸ್ಥಗಿತಗೊಂಡು, ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡಿದ್ದರೆ, ಕೆಲವು ಸಂಪೂರ್ಣವಾಗಿ ರದ್ದುಗೊಂಡವು. ಪರಿಣಾಮವಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.
ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಸೇವೆ ಒದಗಿಸುವ ಕಾಲಿನ್ಸ್ ಏರೋಸ್ಪೇಸ್ ಈ ದಾಳಿಯಿಂದ ತಾಂತ್ರಿಕ ತೊಂದರೆ ಉಂಟಾಗಿದೆ ಎಂದು ದೃಢಪಡಿಸಿದೆ. ಹೀಥ್ರೂ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ನೀಡುತ್ತಾ, ತಮ್ಮ ವಿಮಾನಗಳ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಿದೆ.
ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತ ವ್ಯವಸ್ಥೆಗಳು ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿಯೇ ನೇರವಾಗಿ ಪ್ರಯಾಣಿಕರ ಚೆಕ್-ಇನ್ ಪ್ರಕ್ರಿಯೆ ನಡೆಸಬೇಕಾಯಿತು. “ಇದರಿಂದಾಗಿ ವಿಮಾನ ವೇಳಾಪಟ್ಟಿಯಲ್ಲಿ ವಿಳಂಬ ಹಾಗೂ ವಿಮಾನ ರದ್ದುಗಳು ಸಂಭವಿಸುತ್ತಿವೆ. ಸಮಸ್ಯೆ ಪರಿಹಾರಕ್ಕಾಗಿ ಸೇವಾ ಪೂರೈಕೆದಾರರು ತುರ್ತು ಕ್ರಮ ಕೈಗೊಂಡಿದ್ದಾರೆ” ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.
ಬರ್ಲಿನ್ ವಿಮಾನ ನಿಲ್ದಾಣವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ನೀಡುತ್ತಾ, “ಯುರೋಪಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಿಸ್ಟಂ ಪೂರೈಕೆದಾರರ ತಾಂತ್ರಿಕ ತೊಂದರೆಯಿಂದ ಚೆಕ್-ಇನ್‌ನಲ್ಲಿ ದೀರ್ಘಕಾಲದ ಕಾಯುವಿಕೆ ಉಂಟಾಗಿದೆ. ತ್ವರಿತ ಪರಿಹಾರಕ್ಕಾಗಿ ಶ್ರಮಿಸುತ್ತಿದ್ದೇವೆ” ಎಂದು ತಿಳಿಸಿದೆ.
ಆದಾಗ್ಯೂ, ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ಹಾಗೂ ಡಿಜಿಟಲ್ ವ್ಯವಹಾರಗಳ ಸಚಿವ ಕ್ರಿಸ್ಜ್ಟೋಫ್ ಗಾವ್ಕೋವ್ಸ್ಕಿ, ದೇಶದ ವಿಮಾನ ನಿಲ್ದಾಣಗಳಿಗೆ ಯಾವುದೇ ಅಪಾಯವಿಲ್ಲ ಎಂದು ಖಚಿತಪಡಿಸಿದರು. “ಪರಿಸ್ಥಿತಿಯ ಕುರಿತು ನಿರಂತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ಇತರ ದೇಶಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಅವರು ಹೇಳಿದರು.
ಈ ನಡುವೆ, ಜರ್ಮನಿಯ ಅತಿದೊಡ್ಡ ಫ್ರಾಂಕ್‌ಫರ್ಟ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್ ವಿಮಾನ ನಿಲ್ದಾಣಗಳು ಯಾವುದೇ ಪರಿಣಾಮವಿಲ್ಲದೆ ಸಾಮಾನ್ಯ ಕಾರ್ಯಾಚರಣೆ ಮುಂದುವರೆಸಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.