ಗೋಣಿಕೊಪ್ಪ:ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆ: ನಿಯಮ ಪಾಲಿಸಿ, ಉತ್ಸವ ಆಚರಿಸಿ: ಡಿವೈಎಸ್ಪಿ ಮಹೇಶ್ ಕುಮಾರ್

ಗೋಣಿಕೊಪ್ಪ:ಗೌರಿ-ಗಣೇಶೋತ್ಸವ ಉತ್ಸವ ಆಚರಣೆ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಪೂರ್ವಭಾವಿ ಸಭೆಯು ಗೋಣಿಕೊಪ್ಪ ಸಮೀಪದ ಅರ್ವತೋಕ್ಲುವಿನ ಭರಣಿ ಹಾಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಅವರು, ಹಬ್ಬ ಹರಿದಿನಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದು ನಮ್ಮ ಸಂಸ್ಕೃತಿ. ಸಾರ್ವಜನಿಕ ಗಣೇಶೋತ್ಸವ ಮಾಡುವುದರಿಂದ, ಸಾರ್ವಜನಿಕರು ಇದರಲ್ಲಿ ಭಾಗಿಯಾಗುವುದರಿಂದ ಕೆಲವು ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಪಾಲನೆ ಮಾಡಬೇಕು.ಕಾನೂನಿನ ನಿಯಮಾನುಸಾರ ಉತ್ಸವವನ್ನು ಆಚರಿಸಬೇಕು. ಯಾರೊಬ್ಬರಿಗೂ ತೊಂದರೆಯಾಗದಂತೆ ಆಚರಣೆ ಮಾಡಬೇಕು. ಮೆರವಣಿಗೆ ಸಂದರ್ಭದಲ್ಲಿ ಕರ್ಕಶ ಶಬ್ದವನ್ನು ಬಳಸಬಾರದು ಯಾವುದೇ ಮೆರವಣಿಗೆಯ ವಾಹನದಲ್ಲಿ ಡಿಜೆ ಹಾಗೂ ಕರ್ಕಶ ಶಬ್ದ ಕಂಡುಬಂದಲ್ಲಿ ಸ್ಥಳದಲ್ಲಿಯೇ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ಗಣೇಶ ಉತ್ಸವವನ್ನು ಉತ್ತಮವಾಗಿ ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕೆಂದು ಸಲಹೆ ನೀಡಿದರು.
ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್ ಅವರು ಮಾತನಾಡಿ, ನಿಗದಿತ ಸಮಯದ ಒಳಗೆ ಉತ್ಸವ ಮೂರ್ತಿಗಳ ವಿಸರ್ಜನೆಗೆ ಸಮಿತಿಗಳು ಮುಂದಾಗಬೇಕು. ಕಳೆದ ಬಾರಿ ಪೊನ್ನಂಪೇಟೆಯಲ್ಲಿ ಕೆಲವು ಗದ್ದಲದ ಘಟನೆಗಳು ನಡೆದಿವೆ ಅಂತಹ ಯಾವುದೇ ಸಮಸ್ಯೆ ಉಂಟಾಗದಂತೆ ಸಮಿತಿಯವರು ಜಾಗೃತಿ ವಹಿಸಬೇಕು. ಗೌರಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೋತ್ಸವದ ಮೆರವಣಿಗೆ ಸಂದರ್ಭ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಸೂಚಿಸಿದರು.
ಗೋಣಿಕೊಪ್ಪ ಠಾಣೆ ಉಪನಿರೀಕ್ಷಕ ಪ್ರದೀಪ್ ಕುಮಾರ್ ಬಿ,ಕೆ, ಪೊನ್ನಂಪೇಟೆ ಠಾಣೆ ಉಪನಿರೀಕ್ಷಕ ನವೀನ್ ಹಾಗೂ ಸಿಬ್ಬಂದಿಗಳಾದ ಮಲ್ಲಪ್ಪ , ತನು ಕುಮಾರ್, ರಘು, ಸಂತೋಷ್, ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಇದ್ದರು.
ವರದಿ: ಚಂಪಾ ಗಗನ, ಪೊನ್ನಂಪೇಟೆ