ಚಳಿಗಾಲದಲ್ಲಿ ಕಾಫಿ, ಟೀ ಪದೇಪದೇ ನೆನಪಾಗುತ್ತದೆ, ಕಾಫಿ ಬದಲಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಕಷಾಯ ಮಾಡಿ ಕುಡಿಯಿರಿ!
ಚಳಿಗಾಲ ಕಾಫಿ ಟೀ ಪದೇಪದೇ ನೆನಪಾಗುತ್ತದೆ....... ಕಾಫಿ ಬದಲಿಗೆ ನಾವು ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಕಷಾಯ ಮಾಡಿ ಕುಡಿಯಲು ಅಭ್ಯಾಸ ಮಾಡಿಕೊಳ್ಳೋಣ. ಯಾಕೆಂದರೆ ಖಾಲಿ ಹೊಟ್ಟೆಗೆ ಕಾಫಿ ಟೀ ಸೇವನೆ ಮಾಡಿದಾಗ ಗ್ಯಾಸ್ಟಿಕ್ ಸಮಸ್ಯೆ ಕೈಕಾಲು ನೋವು ಹೆಚ್ಚಾಗುತ್ತದೆ. ಉಪಹಾರದ ನಂತರ ಕಾಫಿ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಕಷಾಯ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆ, ಪಚನ ಕ್ರಿಯೆ, ಗ್ಯಾಸ್ಟಿಕ್ ಸಮಸ್ಯೆ, ವಾತ ಪಿತ್ತ ಕಫ ಇನ್ನು ಹಲವು ಸಮಸ್ಯೆಗಳಿಂದ ಮುಕ್ತರಾಗಬಹುದು.
ಕಷಾಯ ಮಾಡಲು ಬೇಕಾದ ಪದಾರ್ಥಗಳು - 1) ಎರಡು ಲೋಟ ನೀರು 2) ಹತ್ತರಿಂದ ಹದಿನೈದು ತುಳಸಿ ದಳಗಳು 3) ಅರ್ಧ ಇಂಚು ಚಕ್ಕೆ ಅರ್ಧ ಇಂಚು ಶುಂಠಿ 4) ಅರ್ಧ ಚಮಚ ಕಾಳು ಮೆಣಸು, ಒಂದು ಏಲಕ್ಕಿ, ಒಂದು ಲವಂಗ. 5) ನಾಲ್ಕು ದೊಡ್ಡ ಪತ್ರೆ ಎಲೆ, ಬೇಕಿದ್ದಲ್ಲಿ ಒಂದು ವೀಳ್ಯದೆಲೆ. 6) ಓಂ ಕಾಳು ಮತ್ತು ಸೋಂಪು ಎರಡು ಸೇರಿ ಅರ್ಧ ಚಮಚ 7) ರುಚಿಗೆ ಕೆಂಪುಕಲ್ಲು ಸಕ್ಕರೆ ಅಥವಾ ಕಪ್ಪು ಬೆಲ್ಲ ( ಜೋನಿ ಬೆಲ್ಲವಾದರೆ ಇನ್ನೂ ಒಳ್ಳೆಯದು ) ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿ ಕುದಿಸಿ ಸೋಸಿ ಖಾಲಿ ಹೊಟ್ಟೆಗೆ ಕಾಫಿಯ ಬದಲು ಕುಡಿಯಬಹುದು.
ಮೇಲೆ ತಿಳಿಸಿದ ಕಷಾಯ ಸೋಸಿ ಉಳಿದ ಪದಾರ್ಥಗಳನ್ನು ಸಂಜೆ ಸಂಜೆಯ ಮಸಾಲಾ ಟೀಯಾಗಿ ಪರಿವರ್ತಿಸಿಕೊಂಡು ಉಪಯೋಗಿಸಬಹುದು ) ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ನಮ್ಮ ಅಡಿಗೆ ಮನೆಯ ಒಳಗೂ ಮತ್ತು ನಮ್ಮ ಕೈತೋಟದಲ್ಲಿ ಸಿಗುವ ಗಿಡಮೂಲಿಕೆ ಭರಿತ ವಸ್ತುಗಳಿಂದ ಉತ್ತಮ ಆರೋಗ್ಯಕ್ಕಾಗಿ ಅಮ್ಮನ ಕೈ ರುಚಿ ಬಳಗದ ನಿಮಗಾಗಿ ಈ ರೆಸಿಪಿ. 🙏
(ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ)
