ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಉತ್ಪಾದನೆಯಲ್ಲಿ ಹೆಚ್ಚಳ
admincoorgdaily

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಕಾಳುಮೆಣಸು ಉತ್ಪಾದನೆಯು ಶೇ.16 ರಷ್ಟು ಹೆಚ್ಚಾಗಬಹುದೆಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯ ಸ್ಥಿತಿ, ರಫ್ತಿನ ಪರಿಣಾಮ, ರೈತರಿಗೆ ಬೆಂಬಲ ಮತ್ತು ಕನಿಷ್ಟ ಆಮದು ಬೆಲೆಯ ಪರಿಷ್ಕರಣೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ 2025-26ರಲ್ಲಿ ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯು ಸುಮಾರು ಶೇ. 16 ರಷ್ಟು ಹೆಚ್ಚಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಭಾರತದ ಕಾಳುಮೆಣಸು ರಫ್ತು ಶೇ. 14.72 ರಷ್ಟು ಹೆಚ್ಚಾಗಿ 101.45 ಮಿಲಿಯನ್ ಡಾಲರ್ ತಲುಪಿದೆ ಮತ್ತು ಎಸ್‌ಪಿಐಸಿಇಡಿ ಯೋಜನೆಯು ಕಾಳುಮೆಣಸು ಬೆಳೆಗಾರರಿಗೆ ಉಪಕರಣಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕಗಳೊಂದಿಗೆ ಬೆಂಬಲ ನೀಡುತ್ತಿದೆ. ದೇಶೀಯ ರೈತರನ್ನು ರಕ್ಷಿಸಲು ಕಾಳುಮೆಣಸು ಆಮದಿಗೆ ಪ್ರತಿ ಕೆಜಿಗೆ ರೂ. 500 ಕನಿಷ್ಟ ಆಮದು ಬೆಲೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.