ಕೇರಳ: ಸ್ಥಳೀಯ ಚುನಾವಣೆಗೆ ಮುನ್ನ ಎಸ್ಐಆರ್ ಕೆಲಸದ ಒತ್ತಡ; ಬಿಎಲ್ಒ ಆತ್ಮಹತ್ಯೆ
ಕಣ್ಣೂರು, ನ. 16: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ತಯಾರಿಯ ನಡುವೆ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲಾ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಪಯ್ಯನ್ನೂರಿನಲ್ಲಿ ರವಿವಾರ ನಡೆದಿದೆ.
ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಮೃತರನ್ನು ಅನೀಶ್ ಜಾರ್ಜ್ (44) ಎಂದು ಗುರುತಿಸಲಾಗಿದೆ. ಪಯ್ಯನ್ನೂರಿನ ಸರ್ಕಾರಿ ಶಾಲೆಯಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕೆಲಸದ ಭಾರದಿಂದ ಕಳೆದ ಕೆಲವು ದಿನಗಳಿಂದ ತೀವ್ರ ಒತ್ತಡಕ್ಕೊಳಗಾಗಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮನೆಯ ಮೊದಲ ಮಹಡಿಯಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಬಿಎಲ್ಒ ಕರ್ತವ್ಯಕ್ಕೆ ಸಂಬಂಧಿಸಿದ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ಎಫ್ಐಆರ್‌ನಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದರು.
“ಎಸ್ಐಆರ್ ಕಾರ್ಯಭಾರದಿಂದ ಪುತ್ರ ಮಾನಸಿಕ ಒತ್ತಡದಲ್ಲಿದ್ದರು,” ಎಂದು ಅನೀಶ್ ಅವರ ತಂದೆ ಮಾಧ್ಯಮಗಳಿಗೆ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
