ಹಾಸನದಲ್ಲಿ ಮೆಕ್ಯಾನಿಕ್‌ ಹತ್ಯೆ: ಶವದ ಮುಂದೆ ಸೆಲ್ಫಿ ವೀಡಿಯೋ ಮಾಡಿ ವಿಕೃತಿ ಮೆರೆದ ಹಂತಕರು!

ಹಾಸನದಲ್ಲಿ ಮೆಕ್ಯಾನಿಕ್‌ ಹತ್ಯೆ: ಶವದ ಮುಂದೆ ಸೆಲ್ಫಿ ವೀಡಿಯೋ ಮಾಡಿ ವಿಕೃತಿ ಮೆರೆದ ಹಂತಕರು!
Photo credit: TV09 (ಫೋಟೋ: ಕೀರ್ತಿ)

ಹಾಸನ, ಡಿ. 09: ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೊಬ್ಬನ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹೂವಿನಹಳ್ಳಿ ಕಾವಲು ಗ್ರಾಮದಿಂದ ಬಂದಿರುವ ಮೆಕ್ಯಾನಿಕ್‌ ಕೀರ್ತಿ (22) ಯವರನ್ನು ಕಲ್ಲಿನಿಂದ ತಲೆ ಮೇಲೆ ಹೊಡೆದು ಕೊಲೆ ಮಾಡಲಾಗಿದ್ದು, ಬಳಿಕ ಹಂತಕರು ಶವದ ಎದುರೇ ನಿಂತು "ನಾವು ಕೊಂದಿದ್ದೇವೆ" ಎಂದು ಹೇಳುತ್ತಾ ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ವೈರಲ್ ಆಗಿದೆ.

ಡಿಸೆಂಬರ್ 08ರ ರಾತ್ರಿ ಮನೆಗೆ ಹಿಂತಿರುಗದ ಕೀರ್ತಿಯ ಬಗ್ಗೆ ಕುಟುಂಬಸ್ಥರು ಹುಡುಕುತ್ತಿರುವ ಸಮಯದಲ್ಲಿ, ಬೆಳಿಗ್ಗೆ ವೈರಲ್ ಆದ ಸೆಲ್ಫಿ ವೀಡಿಯೋದಲ್ಲಿ ಒಬ್ಬ ಯುವಕ ಮೃತದೇಹದ ಮುಂದೆ ನಿಂತು ಕೊಲೆಗೆ ಹೊಣೆ ಹೊತ್ತಿರುವ ದೃಶ್ಯಗಳು ಕಂಡುಬಂದಿದೆ. ವೀಡಿಯೋ ಜಾಡು ಹಿಡಿದ ಪೊಲೀಸರು ಬಿಟ್ಟಗೌಡನಹಳ್ಳಿ ಬಳಿ ಶವ ಪತ್ತೆಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಪಾರ್ಟಿ ಬಳಿಕ ಗಲಾಟೆ?

ವೀಡಿಯೋ ಮಾಡಿದವನು ಉಲ್ಲಾಸ್ ಎಂಬ ಆಟೋ ಚಾಲಕನಾಗಿದ್ದು, ಹಾಸನ ಜಿಲ್ಲೆಯ ಆಲೂರು ಮೂಲದವನು ಎಂದು ಪೊಲೀಸರು ಗುರುತಿಸಿದ್ದಾರೆ. ಕೀರ್ತಿ ಮತ್ತು ಉಲ್ಲಾಸ್ ಸೇರಿ ಮತ್ತಿಬ್ಬರು ಯುವಕರು ಡಿಸೆಂಬರ್ 08ರ ಸಂಜೆ ಪಾರ್ಟಿ ನಡೆಸಿದ್ದು, ಬಳಿಕ ಏನೋ ಕಾರಣಕ್ಕೆ ಗಲಾಟೆ ನಡೆದು ಕೀರ್ತಿ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ವೀಡಿಯೋಗಳಲ್ಲಿ "ನಾವು ದೊಡ್ಡವರಾದ್ವಿ, ನಾವೂ ಬೆಳೆದ್ವಿ" ಎಂದು ಹೇಳುತ್ತಾ ಕ್ರೌರ್ಯಕ್ಕೆ ಸಂಭ್ರಮಿಸುವ ಉಲ್ಲಾಸ್‌ ನ ವರ್ತನೆ ಜನರನ್ನು ಬೆಚ್ಚಿಬೀಳಿಸಿದೆ.

ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಹಾಸನ ನಗರ ಠಾಣೆ ಪೊಲೀಸರು ಶ್ವಾನದಳ, ಸೂಕೊ ತಂಡ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವದ ಹತ್ತಿರವಿದ್ದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಲಾಗಿದೆ.

ಹಾಸನದಲ್ಲಿ ಗಾಂಜಾ ನಶೆಯ ದುಷ್ಪರಿಣಾಮಗಳು ದಿನೇದಿನೇ ಹೆಚ್ಚುತ್ತಿದ್ದು, ಅಮಲಿನಲ್ಲಿರುವ ಯುವಕರಿಂದ ಇಂತಹ ಕ್ರೌರ್ಯ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.