ಮದುವೆಗೆ ಕೆಲ ಕ್ಷಣಗಳ ಮೊದಲು ಸೀರೆ, ಖರ್ಚಿನ ಜಗಳ; ಮದುಮಗಳನ್ನು ಕೊಲೆ ಮಾಡಿ ಪರಾರಿಯಾದ ಮದುಮಗ!

ಮದುವೆಗೆ ಕೆಲ ಕ್ಷಣಗಳ ಮೊದಲು ಸೀರೆ, ಖರ್ಚಿನ ಜಗಳ; ಮದುಮಗಳನ್ನು ಕೊಲೆ ಮಾಡಿ ಪರಾರಿಯಾದ ಮದುಮಗ!
Photo credit: INDIA TODAY

ಭಾವನಗರ: ಸೀರೆಯ ಆಯ್ಕೆ ಮತ್ತು ಮದುವೆ ಖರ್ಚುಗಳ ವಿಚಾರವಾಗಿ ಉಂಟಾದ ಕುಟುಂಬ ಕಲಹ ಮದುವೆಯ ದಿನವೇ ದಾರುಣ ಅಂತ್ಯ ಕಂಡಿದ್ದು, 24 ವರ್ಷದ ವಧುವನ್ನು ವರನೇ ಹತ್ಯೆಗೈದ ಘಟನೆ ಗುಜರಾತ್ ನ ಭಾವನಗರದಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ನವೆಂಬರ್ 15ರಂದು ಸಜನ್ ಬರಯ್ಯನನ್ನು ವಿವಾಹವಾಗಬೇಕಿದ್ದ ಸೋನಿ ರಾಥೋಡ್ ಮದುವೆಯ ದಿನದ ಬೆಳಗ್ಗೆಯೇ ಅಮಾನುಷ ದಾಳಿಗೆ ಬಲಿಯಾಗಿದ್ದಾಳೆ. ಸೀರೆಯ ಆಯ್ಕೆ ಹಾಗೂ ಕೆಲವು ವೆಚ್ಚಗಳ ಬಗ್ಗೆ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಅದು ಹಿಂಸಾತ್ಮಕವಾಗಿ ತಿರುಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಪೋದ್ರಿಕ್ತನಾದ ಸಜನ್, ಕಬ್ಬಿಣದ ಪೈಪ್‌ನಿಂದ ಸೋನಿಯ ತಲೆಗೆ ಹಲ್ಲೆ ನಡೆಸಿ, ನಂತರ ತಲೆಯನ್ನು ಗೋಡೆಗೆ ಅಪ್ಪಳಿಸುವಂತೆ ಮಾಡಿದ್ದಾನೆ. ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಸೋನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಗಂಗಾ ಜಾಲಿಯಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಡಿಸಿಪಿ ಆರ್.ಆರ್. ಸಿಂಧಲ್ ತಿಳಿಸಿದ್ದಾರೆ. “ಸೋನಿ ಮತ್ತು ಸಜನ್ ವಿವಾಹಕ್ಕೂ ಮೊದಲು ಒಟ್ಟಿಗೆ ವಾಸಿಸುತ್ತಿದ್ದರು. ಮದುವೆಯ ದಿನವೇ ವಾಗ್ವಾದ ತೀವ್ರಗೊಂಡಿದೆ. ಹಲ್ಲೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ” ಎಂದು ಅವರು ಹೇಳಿದರು. 

ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆರೋಪಿಯ ಪತ್ತೆಗೆ ತಂಡಗಳನ್ನು ರಚಿಸಿ ಶೋಧ ಮುಂದುವರೆಸಿದ್ದಾರೆ. ಘಟನೆಯ ಮುನ್ನಾ ದಿನವೂ ಸಜನ್ ಜಗಳ ಮಾಡಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆ ಪ್ರಕರಣದಲ್ಲೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.