ಪ್ರಿಯಕರ ಇಷ್ಟಪಡಲಿಲ್ಲ ಎಂದು ಮಗಳನ್ನೇ ಕೊಂದ ತಾಯಿ!

ಪ್ರಿಯಕರ ಇಷ್ಟಪಡಲಿಲ್ಲ ಎಂದು ಮಗಳನ್ನೇ ಕೊಂದ ತಾಯಿ!

ಅಜ್ಮೇರ್ (ರಾಜಸ್ಥಾನ): ಪ್ರಿಯಕರನ ಅಸಮಾಧಾನಕ್ಕೆ ಮಣಿದು, ತಾನು ಪತಿಯಿಂದ ಪಡೆದಿದ್ದ ಮೂರರ ಹರೆಯದ ಮಗಳನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ ಮಹಿಳೆಯನ್ನು ಅಜ್ಮೇರ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಘಾತ ಮೂಡಿಸಿದ್ದು, ಮನ ಕಲುಕಿದೆ. 

ಮೂಲತಃ ಉತ್ತರ ಪ್ರದೇಶದ ವಾರಾಣಸಿಯ ನಿವಾಸಿ ಅಂಜಲಿ (28) ಪತಿಯಿಂದ ಪ್ರತ್ಯೇಕಗೊಂಡ ಬಳಿಕ ಅಜ್ಮೇರ್‌ಗೆ ಸ್ಥಳಾಂತರಗೊಂಡು ಪ್ರಿಯಕರ ಅಲ್ಕೇಶ್ ಜೊತೆ ವಾಸ ಮಾಡುತ್ತಿದ್ದರು. ಇಬ್ಬರೂ ಅಜ್ಮೇರ್‌ನಲ್ಲಿಯೇ ಹೋಟೆಲ್‌ವೊಂದರಲ್ಲಿ ಉದ್ಯೋಗದಲ್ಲಿದ್ದರು. ಆದರೆ ಅಲ್ಕೇಶ್, ಅಂಜಲಿ ಮಗಳನ್ನು ಒಪ್ಪಿಕೊಳ್ಳದೆ, ನಿರಂತರವಾಗಿ ಅಣಕಿಸುತ್ತಿದ್ದ. ಬೇರೆ ವ್ಯಕ್ತಿಯಿಂದ ಜನಿಸಿದವಳು ಎಂದು ಹಿಯಾಳಿಸುತ್ತಿದ್ದ.

ಕಳೆದ ಮಂಗಳವಾರ ರಾತ್ರಿ ಮಗಳನ್ನು ಮಲಗಿಸಿದ ನಂತರ, ಅಂಜಲಿ ಆಕೆಯನ್ನು ಎತ್ತಿಕೊಂಡು ಸರೋವರದ ಕಡೆ ವಾಕಿಂಗ್‌ಗೆ ತೆರಳಿದಳು. ಅಲ್ಲಿ ಮಗಳನ್ನು ನೀರಿಗೆ ಎಸೆದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 ತಡರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ಗೋವಿಂದ್ ಶರ್ಮಾ ಅಂಜಲಿ ಮತ್ತು ಅಲ್ಕೇಶ್‌ರನ್ನು ಕಂಡು, “ಈಷ್ಟು ಹೊತ್ತಿಗೆ ಇಲ್ಲಿ ಏಕೆ?” ಎಂದು ಪ್ರಶ್ನಿಸಿದರು. ಅದಕ್ಕೆ ಅಂಜಲಿ, “ಮಗುವನ್ನು ಜೊತೆಗೆ ತಂದಿದ್ದೆ, ಆದರೆ ದಾರಿಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಅದರಿಂದಲೆ ಹುಡುಕುತ್ತಾ ಬಂದಿದ್ದೇವೆ” ಎಂದು ಉತ್ತರ ನೀಡಿದಳು.

ಆದರೆ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಂಜಲಿ ಮಗಳನ್ನು ಕೈಯಲ್ಲಿ ಹಿಡಿದು ಸರೋವರದ ಸುತ್ತ ನಡೆಯುತ್ತಿರುವುದು, ಬಳಿಕ ರಾತ್ರಿ 1.30ರ ಸುಮಾರಿಗೆ ಒಬ್ಬಳೇ ಹಿಂದಿರುಗುತ್ತಿರುವುದು ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಪತ್ತೆಯಾಯಿತು. ಈ ದೃಶ್ಯಾವಳಿಗಳು ಅಂಜಲಿಯ ಹೇಳಿಕೆಗೆ ವಿರುದ್ಧವಾಗಿದ್ದು, ಪೊಲೀಸರಿಗೆ ಅನುಮಾನವನ್ನು ಹುಟ್ಟಿಸಿತು.

ಬುಧವಾರ ಬೆಳಿಗ್ಗೆ ಸರೋವರದಿಂದ ಮಗುವಿನ ಮೃತದೇಹವನ್ನು ಪೊಲೀಸರು ಪತ್ತೆಹಚ್ಚಿದರು. ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಅಂಜಲಿ ಮಗುವನ್ನು ಸರೋವರದಲ್ಲಿ ಎಸೆದು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಳು. ತನಿಖೆಯಿಂದ, ಈ ಅಪರಾಧವನ್ನು ಆಕೆ ಒಬ್ಬಳೇ ಮಾಡಿರುವುದು ದೃಢಪಟ್ಟಿದೆ.

ಅಂಜಲಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ಅಲ್ಕೇಶ್ ನನಗೆ ಸದಾ ಮಗಳ ವಿಷಯದಲ್ಲಿ ಅಸಹನೆ ತೋರಿಸುತ್ತಿದ್ದ. ‘ಅವಳು ನಿನ್ನ ಪತಿಯ ಮಗಳು, ನನಗೆ ಬೇಡ’ ಎಂದು ಹೀಯಾಳಿಸುತ್ತಿದ್ದ. ಈ ಒತ್ತಡ ಮತ್ತು ಅವಮಾನವನ್ನು ಸಹಿಸಲಾರದೆ ನಾನು ಈ ಹೆಜ್ಜೆ ಇಟ್ಟೆ” ಎಂದು ಒಪ್ಪಿಕೊಂಡಿದ್ದಾಳೆ.

ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಅಂಜಲಿಯನ್ನು ಬಂಧಿಸಿದ್ದಾರೆ. ಅಲ್ಕೇಶ್ ಈ ಅಪರಾಧದಲ್ಲಿ ಯಾವುದೇ ನೇರ ಅಥವಾ ಪರೋಕ್ಷ ಸಂಬಂಧ ಹೊಂದಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.