ಹೆರಿಗೆಗೆ ತೆರಳುತ್ತಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗಿದ ಮಗು!

ಹೆರಿಗೆಗೆ ತೆರಳುತ್ತಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗಿದ ಮಗು!
Photo credit:Asiant news

ಹಳಿಯಾಳ (ಡಿ.10): ಜೊಯಿಡಾ ತಾಲೂಕಿನ ಜಗಲ್‌ ಬೇಟ್‌ನಲ್ಲಿ ಹುಟ್ಟುಹಬ್ಬದಂದೇ ಗರ್ಭಿಣಿಯೊಬ್ಬರು ಹೆರಿಗೆಗೆ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ಅಕಾಲಿಕವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾಂಡೇಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂಬ ಕುಟುಂಬ ಸದಸ್ಯರ ಆರೋಪ ಹಿನ್ನೆಲೆ ಆಸ್ಪತ್ರೆಯಲ್ಲಿ ಗಲಾಟೆಯೂ ನಡೆದಿದೆ ಎಂದು ತಿಳಿದು ಬಂದಿದೆ.

ವೈದ್ಯರು ಶಿಫಾರಸು ಮಾಡಿದ ನಿರೀಕ್ಷಿತ ಹೆರಿಗೆ ದಿನಾಂಕ ಹಿನ್ನೆಲೆಯಲ್ಲಿ ರೋಹಿಣಿಯನ್ನು ಕುಟುಂಬಸ್ಥರು ದಾಂಡೇಲಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ನಿನ್ನೆ ಮಧ್ಯರಾತ್ರಿ ಅವರ ಆರೋಗ್ಯ ಏರುಪೇರಾಗತೊಡಗುತ್ತಿದ್ದಂತೆಯೇ ವೈದ್ಯರು ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿದರು ಎಂದು ತಿಳಿದು ಬಂದಿದೆ.

ಧಾರವಾಡಕ್ಕೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಹಳಿಯಾಳಕ್ಕೆ ತಲುಪುವಷ್ಟರಲ್ಲಿ ರೋಹಿಣಿಯ ಸ್ಥಿತಿ ಹದಗೆಟ್ಟಿತು. ತಕ್ಷಣ ಆಕೆಯನ್ನು ಹಳಿಯಾಳ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾಗ, ವೈದ್ಯರು ರೋಹಿಣಿ ಆಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಪ್ರಾಥಮಿಕ ವೈದ್ಯಕೀಯ ವರದಿ ಪ್ರಕಾರ ಹೃದಯಾಘಾತ ದುರಂತಕ್ಕೆ ಕಾರಣ ಎನ್ನಲಾಗಿದೆ.

ರೋಹಿಣಿಯ ಅಕಾಲಿಕ ಸಾವು ಹಾಗೂ ಗರ್ಭದಲ್ಲಿದ್ದ ಮಗುವಿನ ಸಾವಿಗೆ ದಾಂಡೇಲಿಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.