ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಯೂಟ್ಯೂಬರ್ ಹಿರಾಲಾಲ್ ಕೇದಾರ್ ಬಂಧನ
ಥಾಣೆ, ಡಿ.7: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲೇ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ ಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸುಮಾರು ಒಂದೂವರೆ ವರ್ಷ ಮೌನ ವಹಿಸಿದ್ದ ಪೀಡಿತೆ, ಬ್ಲ್ಯಾಕ್‌ಮೇಲ್ ಹಾಗೂ ನಿರಂತರ ಕಿರುಕುಳ ತಾಳಲಾರದೆ ಇತ್ತೀಚೆಗೆ ಥಾಣೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, 2024ರ ಆಗಸ್ಟ್ 25ರಂದು ಈ ಘಟನೆ ನಡೆದಿದ್ದು, ಆರೋಪಿಗಳಾದ ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಮಹಿಳೆಗೆ ಕೇಕ್‌ನಲ್ಲಿ ನಿದ್ರಾಜನಕ ಮಾತ್ರೆ ಬೆರೆಸಿ ತಿನ್ನಿಸಿ ಎಚ್ಚರ ತಪ್ಪಿಸಿದ ಬಳಿಕ, ಕಾರಿನೊಳಗೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಈ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಅದನ್ನು ಆಧಾರವನ್ನಾಗಿ ಮಾಡಿಕೊಂಡು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.
ಮಹಿಳೆ ಕುಟುಂಬದವರಿಗೂ ವಿಷಯ ತಿಳಿಸದೆ ಭಯದಿಂದ ಮೌನವಾಗಿದ್ದರೂ, ಕಳೆದ ಕೆಲ ವಾರಗಳಿಂದ ಆರೋಪಿಗಳಲ್ಲಿ ಒಬ್ಬನು ಮತ್ತೆ ಲೈಂಗಿಕ ಒತ್ತಾಯ ಆರಂಭಿಸಿದ್ದರಿಂದ, ಕೊನೆಗೂ ದೂರು ನೀಡಲು ಮುಂದಾಗಿದ್ದಾರೆ.
ದೂರು ದಾಖಲಿಸಿದ ತಕ್ಷಣವೇ ಪೊಲೀಸರು ಹಿರಾಲಾಲ್ ಕೇದಾರ್ ಅನ್ನು ಬಂಧಿಸಿದ್ದು, ಪರಾರಿಯಾಗಿರುವ ರವಿ ಪವಾರ್ ಪತ್ತೆಗೆ ವಿಶೇಷ ತಂಡ ಕಾರ್ಯಾಚರಣೆ ಮಾಡುತ್ತಿದೆ. ಇಬ್ಬರೂ ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿದ್ದು, ಇವರಿಬ್ಬರ ವಿರುದ್ಧ ಹಿಂದೆಯೂ ಸುಲಿಗೆ ಸೇರಿದಂತೆ ಬೇರೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
