ಪತಿ, ಮೂವರು ಮಕ್ಕಳನ್ನು ಬಿಟ್ಟು ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಮಹಿಳೆ ಪರಾರಿ
ಇಟಾ (ಉತ್ತರ ಪ್ರದೇಶ): ಇಟಾ ಜಿಲ್ಲೆಯ 25 ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಮೂವರು ಮಕ್ಕಳನ್ನು ಬಿಟ್ಟು, ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಂದಿಗೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮನೀಷಾ (25) ಎಂಬ ಮಹಿಳೆ ಸುಮಾರು ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಪತಿ ಭೂಪ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ ಪೊಲೀಸರು ಬದೌನ್ ಜಿಲ್ಲೆಯಲ್ಲಿ ಮನೀಷಾರನ್ನು ಪತ್ತೆಹಚ್ಚಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ನ್ಯಾಯಾಲಯಕ್ಕೆ ಹಾಜರುಪಡಿಸಿದರು.
“ನನ್ನ ಪತಿ ಮದ್ಯವ್ಯಸನಿ, ಜೂಜಾಡುತ್ತಾನೆ. ಅನೇಕ ಬಾರಿ ಅಪರಿಚಿತರನ್ನು ಮನೆಗೆ ಕರೆತಂದು ನನ್ನ ಮೇಲೆ ಲೈಂಗಿಕವಾಗಿ ಒತ್ತಡ ಹೇರುತ್ತಿದ್ದ. ಇಂತಹ ವ್ಯಕ್ತಿಯೊಂದಿಗೆ ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯದ ಮುಂದೆ ಮನೀಷಾ ಆರೋಪಿಸಿದರು.
ಆಕೆ ಬದೌನ್ ಜಿಲ್ಲೆಯ ಮುಖೇಶ್ ಯಾದವ್ ಎಂಬ ಯುವಕನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿಕೊಂಡಿದ್ದಾಗಿ ಹೇಳಿದ್ದಾರೆ. ಅವರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು ಎಂದು ಅವರು ತಿಳಿಸಿದರು.
“ನಾನು ಈಗ ಅವನೊಂದಿಗೇ ವಾಸಿಸಲು ಬಯಸುತ್ತೇನೆ. ನನ್ನ ಮಕ್ಕಳನ್ನು ನನ್ನೊಂದಿಗೆ ಕರೆದುಕೊಂಡು ಹೋಗುವುದಿಲ್ಲ,” ಎಂದು ಮನೀಷಾ ಸ್ಪಷ್ಟಪಡಿಸಿದರು.
ನ್ಯಾಯಾಲಯದ ಹೊರಗೆ ಮನೀಷಾಳ ಮಾವ ಹಂಸರಾಜ್ ಹಾಗೂ ಆಕೆಯ ಮಕ್ಕಳು ಪರಿಪರಿಯಾಗಿ ಬೇಡಿಕೊಂಡರೂ, ಆಕೆ ಹಿಂತಿರುಗಿ ನೋಡಲಿಲ್ಲ.
