ಕೊಡಗಿನಲ್ಲಿ 8 ಆರೋಗ್ಯ ಸಂಸ್ಥೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆ

ಕೊಡಗಿನಲ್ಲಿ  8 ಆರೋಗ್ಯ ಸಂಸ್ಥೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆ

ಮಡಿಕೇರಿ:ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಶಾಕಿರಣ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ 393 ಆರೋಗ್ಯ ಸಂಸ್ಥೆಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಬಿಬಿಎಂಪಿ ವಲಯದ ಬೆಂಗಳೂರಿನ ಹೊಸಹಳ್ಳಿ ಆಸ್ಪತ್ರೆಯಲ್ಲಿ ಇಂದು ಉದ್ಘಾಟಿಸಿದರು. 

       ಅದೇ ಪ್ರಕಾರ ಕೊಡಗಿನಲ್ಲೂ ವೈದ್ಯಕೀಯ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು ಎಂಟು ಕಡೆ ಏಕಕಾಲದಲ್ಲಿ ಉದ್ಘಾಟಿಸಲಾಯಿತು.    

      ಕೊಡಗಿನಲ್ಲಿ ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ 4,750 ಫಲಾನುಭವಿಗಳಿಗೆ ದೃಷ್ಟಿ ಪರೀಕ್ಷೆ ಮಾಡಲಾಗಿದೆ. 851 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 114 ಫಲಾನುಭವಿಗಳಿಗೆ ಉಚಿತ ವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದು ಡಾ.ಆನಂದ್ ಅವರು ಮಾಹಿತಿ ನೀಡಿದರು.

      ಆಶಾ ಕಿರಣ ಕಾರ್ಯಕ್ರಮದ ಮೂಲ ಉದ್ದೇಶಗಳು ರಾಜ್ಯವನ್ನು ಮತ್ತು ಜಿಲ್ಲೆಯನ್ನು ಅಂದತ್ವ ಮುಕ್ತ ರಾಜ್ಯ ಹಾಗೂ ಜಿಲ್ಲೆಯನ್ನಾಗಿಸುವ ಸದುದ್ದೇಶವಾಗಿದೆ. ಆಶಾಕಿರಣ ಯೋಜನೆಯನ್ನು ಶಾಶ್ವತವಾಗಿ ಮತ್ತು ಉಚಿತವಾಗಿ ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ವ್ಯವಸ್ಥೆ ಮಾಡಲು ಈ ಕಾರ್ಯಕ್ರಮವನ್ನು ಏಕಕಾಲದಲ್ಲಿ ಉದ್ಘಾಟಿಸಲಾಗಿದೆ. ದೃಷ್ಟಿ ದೋಷ ಕಣ್ಣಿನ ಸಮಸ್ಯೆ ಇದ್ದಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ದೃಷ್ಟಿ ದೋಷ ಇದ್ದಲ್ಲಿ ಉಚಿತ ಕನ್ನಡಕ ವಿತರಿಸಲಾಗುತ್ತದೆ.    

     ಕಣ್ಣಿನ ಪೊರೆ ಇದ್ದಲ್ಲಿ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಡಯಾಬಿಟಿಕ್ ರೆಟಿನೋಪತಿ ಇದ್ದಲ್ಲಿ ಉನ್ನತ ಮಟ್ಟಕ್ಕೆ ಉನ್ನತ ಚಿಕಿತ್ಸೆಗೆ ಉಚಿತವಾಗಿ ರೆಫರ್ ಮಾಡಲಾಗುತ್ತದೆ ಎಂದು ಡಾ. ಆನಂದ್ ರವರು ತಿಳಿಸಿದರು.

      ಸೋಮವಾರಪೇಟೆ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆಯಲ್ಲಿ ಅಂಧತ್ವ ನಿವಾರಣ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ. ಆನಂದ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಚಿತವಾಗಿ ಕನ್ನಡಕವನ್ನು ವಿತರಿಸಿದರು. ಕುಶಾಲನಗರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಶಸ್ತ್ರ ಚಿಕಿತ್ಸಕರು ಮತ್ತು ಆಡಳಿತ ವೈದ್ಯಾಧಿಕಾರಿಗಳಾದ ಡಾ. ಮಧುಸೂಧನ್ ರವರು ಕಾರ್ಯಕ್ರಮ ಉದ್ಘಾಟಿಸಿ ಉಚಿತ ಕನ್ನಡಕವನ್ನು ವಿತರಿಸಿದರು. ಸೋಮವಾರಪೇಟೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ. ಜಮೀರ್, ಡಾ. ಶಿವಪ್ರಸಾದ್, ಡಾ. ಕಿರಣ್ ಡಾಕ್ಟರ್ ಅಫ್ರೀನಾ, ಮೀನಾಕ್ಷಿ ನೇತ್ರಾಧಿಕಾರಿ ಚೇತನ್ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

    ಕುಶಾಲನಗರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಶಿವಕುಮಾರ್, ಡಾ. ಕೀರ್ತಿರಾಜ್, ಡಾ.ಪ್ರತಿಭಾ ಡಾ.ಅಂಜಲಿ ಕೃಷ್ಣಯ್ಯ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ನೇತ್ರಾಧಿಕಾರಿ ಆದರ್ಶ್, ಲಿಪಿಕ ನೌಕರರಾದ ಷಣ್ಮುಖ ಮತ್ತು ವಿಶು ಕುಮಾರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.