ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಾನುವಾರು ಹಂತಕ ವ್ಯಾಘ್ರ ಸೆರೆ ಕಾರ್ಯಚರಣೆ:ಹುಲಿ ಹೆಜ್ಜೆ ಗುರುತು ಅನುಸರಿಸಿ ಕೂಂಬಿಂಗ್-: ಎರಡು ಸಾಕಾನೆಗಳ ಸಹಿತ 80 ಮಂದಿಯ ತಂಡ ಭಾಗಿ

ಪೊನ್ನಂಪೇಟೆ: ತಾಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ, ಸಾವಿಗೆ ಕಾರಣವಾಗುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಪೊನ್ನಂಪೇಟೆ ವ್ಯಾಪ್ತಿಯ ಹುದಿಕೇರಿ, ಹರಿಹರ, ಕೋಣಗೇರಿ, ಬೆಳ್ಳೂರು, ಟಿ.ಶೆಟ್ಟಿಗೇರಿ ಕಡೆಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಾ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಬೆಳ್ಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಾಸ್ತವ್ಯ ಹೂಡಿ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದಲೇ ಬಳ್ಳೆ ಮತ್ತು ಮತ್ತಿಗೋಡು ಸಾಕಾನೆ ಶಿಬಿರದ ಮಹೇಂದ್ರ ಹಾಗೂ ಭೀಮ ಹೆಸರಿನ 2 ಸಾಕಾನೆಗಳ ಸಹಾಯದಿಂದ ಹುಲಿ ಸೆರೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿದರು. ಕಾರ್ಯಾಚರಣೆಗೂ ಮುನ್ನ ಡಿಸಿಎಫ್ ಜಗನ್ನಾಥ್, ಎಸಿಎಫ್ ಗೋಪಾಲ, ಅರವಳಿಕೆ ತಜ್ಞ ಡಾಕ್ಟರ್ ರಮೇಶ್, ಭೀಮ ಆನೆಯ ಮಾವುತ ಗುಂಡಣ್ಣ, ಮಹೇಂದ್ರ ಆನೆಯ ಮಾವುತ ಮಲ್ಲಿಕಾರ್ಜುನ ಅವರುಗಳು ಬಳ್ಳೆ ಸಾಕಾನೆ ಶಿಬಿರದ ಮಹೇಂದ್ರ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಭೀಮನಿಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದರು. ಬೆಳ್ಳೂರು ಹಾಗೂ ಹುದಿಕೇರಿ ಗ್ರಾಮಗಳ ಕಾಫಿ ತೋಟ, ದೇವರ ಕಾಡುಗಳು ಹಾಗೂ ಗದ್ದೆಗಳಲ್ಲಿ ಹುಲಿಯ ಹೆಜ್ಜೆ ಗುರುತು ಅನುಸರಿಸಿ ಹುಲಿ ಇರುವ ಪ್ರದೇಶವನ್ನು ಪತ್ತೆ ಹಚ್ಚಲು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.
ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಜಗನಾಥ್ ಅವರು ಮಾತನಾಡಿ, ಹಲವಾರು ದಿನಗಳಿಂದ ಜಾನುವಾರುಗಳ ಬಲಿ ಪಡೆಯುತ್ತಿರುವ ಹುಲಿಯನ್ನು ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ ಪ್ರಕಾರ ಗುರುತಿಸಲಾಗಿದೆ. ಹುಲಿ ಸೆರೆ ಕಾರ್ಯಾಚರಣೆಗೆ 2 ಆನೆಗಳ ಸಹಿತ ನುರಿತ ಅರಣ್ಯ ಇಲಾಖೆ ಸಿಬ್ಬಂದಿಗಳ ತಂಡವನ್ನು ಬಳಸಲಾಗುತ್ತಿದೆ. ಮಾವುತರು, ಕಾವಾಡಿಗರು ಮತ್ತು ಈ ಭಾಗದ ಪ್ರತಿಯೊಂದು ಸ್ಥಳದ ಬಗ್ಗೆ ಅರಿವಿರುವ ಅರಣ್ಯ ಸಿಬ್ಬಂದಿ, ವಲಯ ಅರಣ್ಯ ಅಧಿಕಾರಿಗಳು, ಸಹಾಯಕ ಸಂರಕ್ಷಣಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಶು ವೈದ್ಯಾಧಿಕಾರಿ ಡಾಕ್ಟರ್ ರಮೇಶ್ ಹಾಗೂ ಮಾದಪ್ಪ, ಶಾರ್ಪ್ ಶೂಟರ್ ರಂಜನ್ ಸೇರಿದಂತೆ 80 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.ಸಾರ್ವಜನಿಕರು ಹುಲಿಯ ಇರುವಿಕೆ ಕುರಿತು ಮಾಹಿತಿಯನ್ನು ಹಂಚಿಕೊಳ್ಳಬೇಕು. ಆ ಮೂಲಕ ಶೀಘ್ರದಲ್ಲಿ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ತಿತಿಮತಿ ಉಪ ವಿಭಾಗ ಸಹಾಯಕ ಸಂರಕ್ಷಾಣಧಿಕಾರಿ ಕೆ.ಪಿ.ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ,ಶಂಕರ್, ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್, ಪಶುವೈದ್ಯಾಧಿಕಾರಿ ಹಾಗೂ ಅರವಳಿಕೆ ತಜ್ಞರು ಡಾ.ರಮೇಶ್, ಮುಖ್ಯ ವನ್ಯಜೀವಿ ಪರಿಪಾಲಕ(ನಾಮ ನಿರ್ದೇಶಿತ) ಡಾ.ಚೆಕ್ಕೇರ ತಮ್ಮಯ್ಯ, ಉಪ ವಲಯ ಅರಣ್ಯಾಧಿಕಾರಿಗಳಾದ ನಾಗೇಶ್, ಸಂದೇಶ್, ಶ್ರೀಧರ್, ದಿವಾಕರ್, ರಕ್ಷಿತ್ ಭರತ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಾಮ ನಿರ್ದೇಶಿತ ಸದಸ್ಯ ಬೋಸ್ ಮಾದಪ್ಪ, ತಿತಿಮತಿ ಹಾಗೂ ವಿರಾಜಪೇಟೆ ಇ.ಟಿ.ಎಫ್ ಸಿಬ್ಬಂದಿಗಳು, ಎಸ್.ಟಿ.ಎಫ್ ಸಿಬ್ಬಂದಿಗಳು ಹಾಗೂ ಪೊನ್ನಂಪೇಟೆ, ವಿರಾಜಪೇಟೆ ಆರ್.ಆರ್ ಸಿಬ್ಬಂದಿಗಳು, ಅರಣ್ಯ ರಕ್ಷಕರು, ವೀಕ್ಷಕರು ಹಾಜರಿದ್ದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ.