ಮಂದಗತಿಯಲ್ಲಿ ಗಿರಿಜನ ಆಶ್ರಮ ಶಾಲೆಯ ಅಭಿವೃದ್ಧಿ ಕಾಮಗಾರಿ: ತಾತ್ಕಾಲಿಕ ಕಟ್ಟಡವೂ ಶಿಥಿಲಾವಸ್ಥೆ: ಆಶ್ರಮ ಶಾಲೆಯ ವಿದ್ಯಾರ್ಥಿಗಳ ಪಾಡು ಅಯೋಮಯ

ಪೊನ್ನಂಪೇಟೆ: ತಾಲೂಕಿನ ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ಗಿರಿಜನ ಆಶ್ರಮ ಶಾಲೆಯಲ್ಲಿ ಸುತ್ತಮುತ್ತಲಿನ ಹಾಡಿಯ ವಿದ್ಯಾರ್ಥಿಗಳು ಒಂದರಿಂದ ಏಳನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು, ಗಿರಿಜನ ಅಶ್ರಮ ಶಾಲೆಯಲ್ಲಿ ನಾಲ್ವರು ಅಡುಗೆ ಸಿಬ್ಬಂದಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದಿನ ಆಶ್ರಮ ಶಾಲೆಯ 1ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಪ್ರವಚನ ಜತೆಗೆ ತರಗತಿ ಕೊಠಡಿಯಲ್ಲೇ ವಿದ್ಯಾರ್ಥಿಗಳು ರಾತ್ರಿ ತಂಗಬೇಕಿತ್ತು. ಈ ಹಿನ್ನೆಲೆಯಲ್ಲಿ, ಆಶ್ರಮ ಶಾಲೆಯ ಈ ಹಿಂದಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದುದರಿಂದ ಐಟಿಡಿಪಿ ಇಲಾಖೆಯಿಂದ ಸುಮಾರು ಒಂದು ಕೋಟಿ 74 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆಶ್ರಮ ಶಾಲೆಯ ಕಟ್ಟಡ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮೇ ಅಂತ್ಯದೊಳಗೆ ಕಟ್ಟಡ ಅಂದರೆ ಶಾಲೆ ಆರಂಭಕ್ಕೂ ಮುನ್ನ ಕಟ್ಟಡ ದುರಸ್ಥಿ ಕಾಮಗಾರಿ ಮುಗಿಯಬೇಕಿತ್ತಾದರೂ ಇನ್ನೂ ಕೂಡ ಕಟ್ಟಡ ದುರಸ್ಥಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಕಟ್ಟಡ ದುರಸ್ಥಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇರುವ ಬೇರೊಂದು ಕಟ್ಟಡಕ್ಕೆ ತಾತ್ಕಾಲಿಕವಾಗಿ ಆಶ್ರಮ ಶಾಲೆಯನ್ನು ಸ್ಥಳಾಂತರಗೊಳಿಸಲಾಗಿದೆ.
ಈ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಶುಚಿತ್ವ ಎಂಬುದು ಮರಿಚಿಕೆಯಾಗಿದೆ. ಈ ಕಟ್ಟಡದಲ್ಲಿ ಶಾಲೆಯ ಮೂವರು ವಿದ್ಯಾರ್ಥಿಗಳು ತಂಗುತ್ತಿದ್ದು, ಇನ್ನುಳಿದ ಹದಿಮೂರು ಮಂದಿ ವಿದ್ಯಾರ್ಥಿಗಳು ಹಾಡಿಗಳಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಈ ಕಟ್ಟಡದಲ್ಲಿ ಮೂವರು ವಿದ್ಯಾರ್ಥಿಗಳು ತಂಗುತ್ತಿರುವ ಕೊಠಡಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಇಂತಹ ಕೊಠಡಿಯಲ್ಲೇ ಮಳೆಗಾಳಿಗೆ ಜೀವ ಕೈಯಲ್ಲಿಡಿದು ವಿದ್ಯಾರ್ಥಿಗಳು ಮಲಗಬೇಕಿದೆ. ಇನ್ನೂ ಈ ಕಟ್ಟಡದಲ್ಲಿರುವ ಶಾಲೆಯ ಅಡುಗೆ ಕೊಠಡಿ ಅಶುಚಿತ್ವದಿಂದ ಕೂಡಿದ್ದು, ಇಂತಹ ಅಶುಚಿತ್ವದ ವಾತಾವರಣದಲ್ಲೇ ವಸತಿ ಶಾಲೆಯ ವಿದ್ಯಾರ್ಥಿಗಳು ದಿನದೂಡಬೇಕಿದೆ. ಈಗಿರುವ ತಾತ್ಕಾಲಿಕ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಂದಗತಿಯಲ್ಲಿ ಸಾಗುತ್ತಿರುವ ಕಟ್ಟಡದ ಅಭಿವೃದ್ದಿ ಕಾಮಗಾರಿ ಚುರುಕುಗೊಳಿಸುವಲ್ಲಿ ಐಟಿಡಿಪಿ ಇಲಾಖೆ ಅಧಿಕಾರಿಗಳು ಮುಂದಾಗಬೇಕಿದ್ದು, ಶೀಘ್ರದಲ್ಲೇ ನೂತನ ಕಟ್ಟಡ ವಿದ್ಯಾರ್ಥಿಗಳಿಗೆ ದೊರಕಿಬೇಕಿದೆ.
ವರದಿ:ಚೆಪ್ಪುಡಿರ ರೋಷನ್