ಸುಂಟಿಕೊಪ್ಪ, ಅನುದಾನ ದುರುಪಯೋಗ :ಗ್ರಾಮ ಪಂಚಾಯಿತಿ ಸದಸ್ಯನ ಸದಸ್ಯತ್ವ ಅನರ್ಹ

ಸುಂಟಿಕೊಪ್ಪ; ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನ ದಿಂದ ತೆಗೆದು ಹಾಕಲಾಗಿದೆ ಮಾತ್ರವಲ್ಲದೆ ಮುಂದಿನ 6 ವರ್ಷಗಳಕಾಲ ಚುನಾವಣೆಗೆ ನಿಲ್ಲದಂತೆ ಆದೇಶಗೊಳಿಸಿ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕೆ.ಕೆ. ಪ್ರಸಾದ್ ಅವರು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಗ್ರಾಮ ಪಂಚಾಯಿತಿ ಅನುದಾನ ರೂ.30,000 ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವುದು ಸಾಬೀತು ಆಗಿರುವ ಹಿನ್ನಲೆಯಲ್ಲಿ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಆಧಿನಿಯಮ 1993 ಪ್ರಕರಣ 43(ಎ) ಅಡಿಯಲ್ಲಿ ಆನರ್ಹಗೊಳಿಸಿದಲ್ಲದೆ ಇದೇ ಅಧೀನಿಯಮ 48(4) ಹಾಗೂ 43 (ಎ) (2) ಅನ್ವಯ 6 ವರ್ಷಗಳಕಾಲ ಚುನಾವಣೆಗೆ ನಿಲ್ಲದಂತೆ ಆನರ್ಹಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣದ ವಿವರ: ಕೆ.ಕೆ.ಪ್ರಸಾದ್ ಅವರು ಉಪಾಧ್ಯಕ್ಷರಾಗಿದ್ದ ಸಂದರ್ಭ ಗ್ರಾಮ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಆವರಣದಲ್ಲಿರುವ ಮಳಿಗೆ 49 ಅನ್ನು ಅನಧಿಕೃತವಾಗಿ ವಶಕ್ಕೆ ತೆಗೆದುಕೊಂಡು ಯಾವುದೇ ಹರಾಜು ಪ್ರಕ್ರಿಯೇ ನಡೆಸದೆ ಒಣಮೀನು ಮಳಿಗೆಯನ್ನು 8 ತಿಂಗಳಿನಿಂದ ನಡೆಸುತ್ತಿದ್ದಾರೆ ಮತ್ತು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೇವು ಅವರ ಹೆಸರಿಗೆ ಸೌರವಿದ್ಯುತ್ ದೀಪ ಅಳವಡಿಸಲು ರೂ 30,000 ಅನುದಾನವನ್ನು ಮಂಜೂರು ಮಾಡಿಸಿಕೊಂಡು ಸದರಿ ಬೀದಿ ದೀಪವನ್ನು ತಮ್ಮ ತಾಯಿಯ ಮನೆಯ ಗೋಡೆಯ ಆವರಣದೊಳಗೆ ಅಳವಡಿಸಿಕೊಂಡು ಸರಕಾರದಿಂದ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಿದ್ದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ಜಿ.ಎನ್.ದಿನೇಶ್ ದೂರು ಸಲ್ಲಿಸಿದರು.
ಈ ದೂರನ್ನು ದಾಖಲಿಸಿಕೊಂಡು ಆರೋಪದ ಕುರಿತು ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಮೈಸೂರು ರವರಿಗೆ ಆದೇಶಿಸಲಾಗಿತ್ತು. ಇದರಂತೆ ಪ್ರಾದೇಶಿಕ ಆಯುಕ್ತರು 5-07-2024 ರಂದು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಮೊದಲ ಆರೋಪವು ಸಾಬೀತುಗೊಂಡಿರುವುದಿಲ್ಲ. 2ನೇ ಆರೋಪದಲ್ಲಿ ಅಧಿಕಾರ ದುರುಪಯೋಗವು ಮೇಲ್ನೋಟಕ್ಕೆ ಸಾಭೀತಾಗಿದ್ದು, ಕೆ.ಕೆ.ಪ್ರಸಾದ್ ವಿರುದ್ಧ ಕ್ರಮ ವಹಿಸಬಹುದೆಂದು ಶಿಫಾರಸ್ಸು ಮಾಡಿದ್ದರು.
ಈ ಹಿನ್ನಲೆಯಲ್ಲಿ ಪ್ರಾದೇಶಿಕ ಆಯುಕ್ತರ ವರದಿಯೊಂದಿಗೆ 12-08-2024 ರಂದು ಕಾರಣ ಕೇಳಿ ನೋಟಿಸನ್ನು ಜಾರಿ ಮಾಡಲಾಗಿತ್ತು. ಈ ಬಗ್ಗೆ ಕೆ.ಕೆ.ಪ್ರಸಾದ್ ಲಿಖಿತ ಸಮಾಜಾಯಿಸಿಕೆ, ದಾಖಲೆಗಳನ್ನು ಸಲ್ಲಿಸಿದ್ದು ಪ್ರಕರಣ ಮುಕ್ತಾಯಗೊಳಿಸಿ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿದ್ದರು.
ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಆರೆ ನ್ಯಾಯಿಕ ನ್ಯಾಯಾಲಯದ ವಿಚಾರಣೆಗೆ 8-10-2024 ರಂದು ತಿಳುವಳಿಕೆ ಪತ್ರವನ್ನು ಜಾರಿಗೊಳಿಸಲಾಗಿತ್ತು. ಆದರಂತೆ ಕುಶಾಲನಗರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ಎಸ್.ಡಿ.ಡಿ.ಎ ಮತ್ತು ಫಲಾನುಭವಿಯಾದ ದೇವು ಹಾಗೂ ಅಂದಿನ ಉಪಾಧ್ಯಕ್ಷರಾಗಿದ್ದ ಕೆ.ಕೆ. ಪ್ರಸಾದ್ 30-10-2024 ರಂದು ನಡೆದ ವಿಚಾರಣೆಗೆ ಹಾಜರಾಗಿದ್ದರು. ಈ ವಿಚಾರಣೆಯಲ್ಲಿ ವಾದಿ ಮತ್ತು ಪ್ರತಿವಾದಿಗಳ ಮೌಖಿಕ ಹೇಳಿಕೆ ಮತ್ತು ದಾಖಲೆಗಳನ್ನು ಪರಿಶೀಲಿಸಿ ಸರಕಾರಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಬಿತಾದ ಹಿನ್ನಲೆಯಲ್ಲಿ ಕೆ.ಕೆ.ಪ್ರಸಾದ್ ಅವರನ್ನು ಸದಸ್ಯತ್ವ ಸ್ಥಾನದಿಂದ ಮತ್ತು ಮುಂದಿನ 6 ವರ್ಷಗಳಕಾಲ ಚುನಾವಣೆಗೆ ನಿಲ್ಲಲು ಅನರ್ಹಗೊಳಿಸಿ ಸರಕಾರ 21-06-2025ರ ಅಧಿಕೃತ ಆದೇಶ ಹೊರಡಿಸಿದೆ.