ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ತಡೆಗೆ ಶ್ರಮಿಸಿ: ಎನ್.ಎಸ್.ಭೋಸರಾಜು

ಮಡಿಕೇರಿ:ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹಾಗೂ ಮಾನವ ಸಂಘರ್ಷ ನಿರಂತರವಾಗಿ ಮುಂದುವರಿದಿದ್ದು, ಮಾನವ ಮತ್ತು ವನ್ಯಪ್ರಾಣಿ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಅಗತ್ಯ ಕಾರ್ಯಯೋಜನೆ ರೂಪಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿ ಇದ್ದು, ಇವುಗಳನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಅರಣ್ಯ ಸಚಿವರ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ಕೊಡಗು ಜಿಲ್ಲೆಯಲ್ಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಬೆಂಗಳೂರಿನಲ್ಲಿ ಅರಣ್ಯ ಸಚಿವರು, ಕೊಡಗು ಜಿಲ್ಲೆಯ ಶಾಸಕರು, ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಸಭೆ ನಡೆಸುವ ಬಗ್ಗೆ ಚರ್ಚಿಸಿದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಕೆಡಿಪಿ ಸಭೆಗೆ ಆಗಮಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವರ ಜೊತೆ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದ್ದು, ಈ ಸಂಬಂಧ ಸಚಿವರು ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ವನ್ಯಪ್ರಾಣಿಗಳ ಹಾವಳಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಎ.ಎಸ್.ಪೊನ್ನಣ್ಣ ಅವರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಕಡಿಮೆಯಾಗಿಲ್ಲ. ವನ್ಯಪ್ರಾಣಿಗಳ ಹಾವಳಿಯಿಂದ ಮಾನವ ಪ್ರಾಣ ಹಾನಿ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು ಎಂದರು.
ಬ್ಯಾರಿಕೇಡ್ ಅಳವಡಿಸುವುದು, ಟ್ರಂಚ್ ನಿರ್ಮಾಣ ಮಾಡುವುದು ಒಂದೆಡೆಯಾಗಿದೆ. ಆದರೂ ಬಿ.ಶೆಟ್ಟಿಗೇರಿ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಾಡಾನೆಗಳು ದಂಡು ದಂಡಾಗಿ ಬರುತ್ತಿವೆ. ಇವುಗಳನ್ನು ನಿಯಂತ್ರಣ ಮಾಡಬೇಕು ಎಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಡಾ.ಮಂತರ್ ಗೌಡ ಅವರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕಾಡಾನೆಗಳನ್ನು ಓಡಿಸುತ್ತಾರೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದರು.
ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಕಾಡಾನೆ ಹಾವಳಿ ಇಂದು ನಿನ್ನೆಯದಲ್ಲ. ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ವನ್ಯಪ್ರಾಣಿ ಹಾವಳಿ ತಡೆಯಲು ವೈಜ್ಞಾನಿಕ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ಮಾಡಿದರು.
ಕಾಡುಗಳಲ್ಲಿ ಕೆರೆಗಳ ಸಂರಕ್ಷಣೆ ಮಾಡಬೇಕು. ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆಗೆದು ಹಣ್ಣು ಹಾಗೂ ಬಿದಿರು ಗಿಡ ಬೆಳೆಯುವಂತಾಗಬೇಕು. ಇದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾಡಿನಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಹಣ್ಣಿನ ಗಿಡ ನೆಡಲಾಗಿದೆ ಎಂಬ ಬಗ್ಗೆ ಅಂಕಿ ಅಂಶ ಸಹಿತ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಬಗ್ಗೆ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ತಿತಿಮತಿ ಸೇರಿದಂತೆ ವಿವಿಧ ಕಡೆಗಳಲ್ಲಿ ಟ್ರಂಚ್ ನಿರ್ಮಾಣ ಮಾಡಿರುವುದರಿಂದ ಕಾಡಾನೆ ಹಾವಳಿ ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ಯಾವ ಯಾವ ಪ್ರದೇಶಗಳಲ್ಲಿ ಕಾಡಾನೆ ಇವೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಬೇಕು. ಕಾಡಾನೆ ಹಾವಳಿ ನಿಯಂತ್ರಿಸಲು ಇರುವ ಕಾರ್ಯಪಡೆಯ ತಂಡ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಡಿಕೇರಿ ವಿಭಾಗದ ಕೆದಕಲ್‍ನಲ್ಲಿ ವನ್ಯಪ್ರಾಣಿಗಳ ಹಾವಳಿ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಬಂದಿದ್ದರೂ ಸಹ ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು 94ಸಿ ಮತ್ತು 94 ಸಿಸಿ ರಡಿ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಈ ಸಂಬಂಧ ಪ್ರತೀ ವಾರ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 700 ಕಾಣೆಯಾದ ಕಡತವಿದ್ದು, ಕಾಣೆಯಾದ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಫಲಾನುಭವಿಗಳಿಗೆ ಆರ್‍ಟಿಸಿ ದೊರೆಯಲಿದೆ. ಈ ಬಗ್ಗೆ ನಾಲ್ಕೈದು ಸಭೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ಅಕ್ರಮ ಸಕ್ರಮ ಸಮಿತಿಯಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಲು ಅವಕಾಶವಿದೆ. ಆದರೂ ಇದರಲ್ಲೂ ಸಹ ವ್ಯತ್ಯಾಸಗಳು ಕಾಣುತ್ತವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಸಮಿತಿ ಸದಸ್ಯರಾದ ಎಚ್.ಎಂ.ಕಾವೇರಿ ಅವರು ಕರಡಿಗೋಡು ಗ್ರಾಮದಲ್ಲಿ ಪ್ರವಾಹ ಪೀಡಿತ ಜನರು ವಾಸ ಮಾಡುತ್ತಿದ್ದು, ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಗಮನ ಸೆಳೆದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಲ್ಲಿನ ಜನರಿಗಾಗಿ ಮಾಲ್ದಾರೆ ಗ್ರಾ.ಪಂ.ನಲ್ಲಿ ಎರಡು ಎಕರೆ ಜಾಗ ಗುರುತಿಸಲಾಗಿದೆ. ಆದರೆ ಯಾರೂ ಸಹ ಅಲ್ಲಿಗೆ ತೆರಳಲು ಮುಂದಾಗುತ್ತಿಲ್ಲ ಎಂದು ಹೇಳಿದರು.
ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ನಿರಾಶ್ರಿತರಿದ್ದು, ಹತ್ತಿರದ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಿಗೆ ವಾಸಿಸಲು ಕನಿಷ್ಠ ನೆಲೆಯನ್ನಾದರೂ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮುಂದಿನ ಎರಡು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಡಾ.ಮಂತರ್ ಗೌಡ ಅವರು ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಎಲ್ಲರ ಪ್ರಯತ್ನ ಮುಖ್ಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಅವರು ಮಾತನಾಡಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿರುವುದು ಇದು ಸರಿಯಲ್ಲ ಎಂದರು.
ಅನುದಾನಿತ ಶಿಕ್ಷಣ ಸಂಸ್ಥೆಗಳು ನೂರಾರು ವರ್ಷಗಳಿಂದ ಶಾಲೆ ಆರಂಭಿಸಿ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಅಂತಹ ಶಾಲೆಗಳಿಗೆ ಕಿರುಕುಳ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ನಿವೃತ್ತರಿಗೆ ಕಾಲಮಿತಿಯಲ್ಲಿ ನಿವೃತ್ತಿ ವೇತನ ಒದಗಿಸುವುದು ಟೈಂ ಬಾಂಡ್ ಮತ್ತಿತರ ಸೌಲಭ್ಯವನ್ನು ಕಾಲ ಮಿತಿಯಲ್ಲಿ ಒದಗಿಸಬೇಕು. ಅದನ್ನು ಬಿಟ್ಟು ವಿಳಂಬ ಮಾಡುವುದಾದರೂ ಏಕೆ ಎಂದು ಬೋಜೇಗೌಡ ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಅನುದಾನಿತ ಶಿಕ್ಷಣ ಸಂಸ್ಥೆಯವರು ದೂರು ನೀಡಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಬೇಕು. ದೂರುಗಳು ಬರದಂತೆ ಎಚ್ಚರವಹಿಸಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳ ಕುಂದುಕೊರತೆ ಸಂಬಂಧಿಸಿದಂತೆ ಜಿ.ಪಂ.ಸಿಇಒ ಅವರಿಗೆ ವರದಿ ನೀಡುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಎ.ಎಸ್.ಪೊನ್ನಣ್ಣ ಅವರು ಸಿದ್ದಾಪುರ ಶಾಲೆಯ ಮಾಹಿತಿ ಒದಗಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರೊಬ್ಬರು ನಾಪೋಕ್ಲು ಶಾಲೆಯಲ್ಲಿ ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಚಿವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಗುಂಡಿಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳುವಂತೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‍ಗಳಿಗೆ ಸೂಚಿಸಿದರು.
ಸರ್ಕಾರದಲ್ಲಿ ಹಣವಿದ್ದು, ಸಮರ್ಪಕವಾಗಿ ಖರ್ಚು ಮಾಡಿದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನುಡಿದರು.
ಸಮಿತಿ ಸದಸ್ಯರಾದ ಎಚ್.ಎಂ.ಕಾವೇರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯಾಗುತ್ತಿರುವ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಮಂತರ್ ಗೌಡ ಅವರು ಹಾಡಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಆದಿವಾಸಿ ಜನರ ಬದುಕನ್ನು ಉತ್ತಮಪಡಿಸುವಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ ಮುಂಗಾರು ಮಳೆ ಅವಧಿಯಲ್ಲಿ ಸೆಸ್ಕ್ ಇಲಾಖೆಯ ಎಂಜಿನಿಯರ್, ಸಿಬ್ಬಂದಿಗಳು ಹೆಚ್ಚಿನ ಕೆಲಸ ಮಾಡಬೇಕಿದೆ. ಗಾಳಿ ಮಳೆಗೆ ವಿದ್ಯುತ್ ಕಂಬ ಬೀಳುವುದು, ಟ್ರಾನ್ಸ್ ಫಾರ್ಮರ್ ಮತ್ತಿತರ ಸಮಸ್ಯೆಗಳು ತಲೆದೋರಲಿದ್ದು, ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕಿದೆ, ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದು ಸಚಿವರು ಸಲಹೆ ಮಾಡಿದರು.
ಸಮಿತಿ ಸದಸ್ಯರಾದ ಸುನಿತಾ ಅವರು ಮನೆ ನಿರ್ಮಾಣ ಸಂದರ್ಭದಲ್ಲಿ ಸೆಸ್ಕ್ ಇಲಾಖೆಯವರು ಅನುಮತಿ ನೀಡಬೇಕಿದೆ. ಆದರೆ ಅನುಮತಿ ನೀಡುತ್ತಿಲ್ಲ ಎಂದು ಸಭೆಯ ಗಮನ ಸೆಳೆದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಭಿಷೇಕ್, ಜಗನ್ನಾಥ್, ಪಾಷಾ ಅವರು ವನ್ಯ ಪ್ರಾಣಿ ಹಾವಳಿ ನಿಯಂತ್ರಣ ಸಂಬಂಧ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಳೆಗಾಲ ಆರಂಭವಾಗಿರುವುದರಿಂದ ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ವಿತರಣೆ ಹಾಗೂ ಕಾಲ ಕಾಲಕ್ಕೆ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಎ.ಮಂಜು, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.