ಅನಾಥ ಯುವತಿಯ ಕನಸನ್ನು ನನಸು ಮಾಡಿದ ‘ಮಾಧ್ಯಮ ಸ್ಪಂದನ’
ಮಡಿಕೇರಿ: ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಯುವತಿಯ ಕನಸನ್ನು ಪತ್ರಕರ್ತರನ್ನು ಒಳಗೊಂಡ ‘ಮಾಧ್ಯಮ ಸ್ಪಂದನ’ ತಂಡ ನನಸು ಮಾಡುವ ಮೂಲಕ ಯುವತಿಗೆ ಬೆಳಕಾಗಿದೆ.
ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ನೇತೃತ್ವದ ‘ಮಾಧ್ಯಮ ಸ್ಪಂದನ’ ೪ ದಿನಗಳಲ್ಲಿ ಬರೋಬ್ಬರಿ ರೂ. ೨.೩೯ ಲಕ್ಷ ಹಣವನ್ನು ದಾನಿಗಳ ಮೂಲಕ ಕ್ರೋಢೀಕರಣ ಮಾಡಿ ಯುವತಿಯ ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕೆಂಬ ಕನಸನ್ನು ನನಸು ಮಾಡಿದೆ.
ತಂದೆ-ತಾಯಿ ಕಳೆದುಕೊಂಡು, ಅಜ್ಜ- ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿರುವ ಸೋಮವಾರಪೇಟೆಯ ಕೆಂಚಮ್ಮಬಾಣೆ (ನಗರೂರು) ನಿವಾಸಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಎ.ಎ. ಕೀರ್ತನಾ ಶೇ. ೭೦ ಅಂಕದೊಂದಿಗೆ ಪಿಯುಸಿ ಮುಗಿಸಿದ್ದು, ಈಕೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಅವಕಾಶ ದೊರೆಯಿತು. ಕಾಲೇಜು ಶುಲ್ಕವಾಗಿ ೧.೫೮ ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇದುವರೆಗೂ ಉಚಿತವಾಗಿ ವ್ಯಾಸಂಗ ಮಾಡಿದ ಕೀರ್ತನ ಆರ್ಥಿಕವಾಗಿ ಹಿಂದುಳಿದಿರುವ ಹಿನ್ನೆಲೆ ಮುಂದಿನ ಶಿಕ್ಷಣಕ್ಕೆ ಹಣವನ್ನು ಭರಿಸುವುದು ಕಷ್ಟದಾಯಕವಾಗಿತ್ತು. ಇಷ್ಟೊಂದು ಹಣ ಪಾವತಿಸುವ ಆರ್ಥಿಕ ಶಕ್ತಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅಜ್ಜ- ಅಜ್ಜಿಗಿರಲಿಲ್ಲ. ಅದಲ್ಲದೆ ತಂದೆ-ತಾಯಿ ಇಲ್ಲ, ಆಸ್ತಿ-ಪಾಸ್ತಿ ಹೊಂದಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ನಿಂದ ಶಿಕ್ಷಣ ಸಾಲವೂ ದೊರೆತಿರಲಿಲ್ಲ.
ಕಾಲೇಜು ಶುಲ್ಕ ಪಾವತಿಸಲು ಆರ್ಥಿಕ ನೆರವು ನೀಡುವಂತೆ ಮಾಧ್ಯಮ ಸ್ಪಂದನ ತಂಡಕ್ಕೆ ವಿದ್ಯಾರ್ಥಿನಿ ಮಾದಾಪುರದ ದೀಪಕ್ ಅವರ ಮೂಲಕ ಮನವಿ ಮಾಡಿದ್ದಳು. ಅನಂತರ ಸಾಮಾಜಿಕ ಜಾಲತಾಣದ ಮೂಲಕ ‘ಮಾಧ್ಯಮ ಸ್ಪಂದನ’ ತಂಡ ದಾನಿಗಳ ನೆರವು ಬಯಸಿತು. ತಾ.೩ ರಂದು ಆರಂಭಗೊಂಡ ಹಣ ಸಂಗ್ರಹಾತಿಗೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯ, ದೇಶದ ಜನರು ಕೂಡ ಸಹಾಯ ಹಸ್ತ ಚಾಚುವ ಮೂಲಕ ಸಂಕಷ್ಟಕ್ಕೆ ಮಿಡಿಯಲಾರಂಭಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಯುವತಿಗೆ ಅವಶ್ಯಕತೆಯಿದ್ದ ರೂ. ೧.೫೮ ಲಕ್ಷ ಹಣವನ್ನು ಸಂದಾಯ ಮಾಡಿದರು. ಅದರೊಂದಿಗೆ ಸೌದಿ ಅರೇಬಿಯದಲ್ಲಿರುವ ಪದ್ಮನಾಭ ಎಂಬವರು ರೂ. ೫೦ ಸಾವಿರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಮಾಧ್ಯಮ ಸಂಯೋಜಕ ಎಲ್. ಪ್ರಕಾಶ್ ರೂ. ೧೦ ಸಾವಿರ ನೆರವು ನೀಡಿದರು. ಇದಲ್ಲದೆ ಅನೇಕರು ಹಣವನ್ನು ಪಾವತಿ ಮಾಡಿದರು. ಯುವತಿಗೆ ಅವಶ್ಯಕತೆಯಿದ್ದ ಹಣಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹಗೊಂಡು ರೂ. ೨.೩೯ ಲಕ್ಷ ಯುವತಿ ಕೀರ್ತನ ಖಾತೆಗೆ ಪಾವತಿಗೊಂಡು ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯಲು ಸಹಕಾರಿಯಾಗಿದೆ. ಮಾಧ್ಯಮ ಸ್ಪಂದನದ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.