ಅಮ್ಮತ್ತಿ:31ನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಅಹೋರಾತ್ರಿ ಹೋರಾಟ! ಮಳೆ ಗಾಳಿಯ ಆರ್ಭಟದ ನಡುವೆಯೂ ಅಮ್ಮತ್ತಿ ನಾಡ ಕಛೇರಿಯಲ್ಲಿ ಸೂರಿಗಾಗಿ ಧರಣಿ!
ಅಮ್ಮತ್ತಿ :- ತಲೆ ಮೇಲೊಂದು ಸೂರಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹೋರಾಟ ಸಮಿತಿ ನೇತೃತ್ವದಲ್ಲಿ ಅಮ್ಮತ್ತಿಯ ನಾಡ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಹೋರಾಟ 31ನೇ ದಿನಕ್ಕೆ ಕಾಲಿರಿಸಿದೆ. ಮಳೆ ಗಾಳಿಯ ಆರ್ಭಟದ ನಡುವೆಯೂ ಅಂಗೈಯಗಲದ ಜಾಗಕ್ಕಾಗಿ ಮಹಿಳೆಯರು, ಪುಟ್ಟ ಮಕ್ಕಳು, ವಯೋವೃದ್ಧರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದು, ನಿವೇಶನ ನೀಡುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಸೋಮವಾರ ಬೆಂಗಳೂರಿನ ಟ್ರಾನ್ಸ್ ಫಾರ್ಮಿಂಗ್ ಟುಮಾರೋ ಫೌಂಡೇಶನ್ ವತಿಯಿಂದ ಅಹೋರಾತ್ರಿ ಧರಣಿ ನಿರತರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸಂಪ್ರೀತ್ ಅವರ ಮುಂದಾಳತ್ವದಲ್ಲಿ ಹೋರಾಟಗಾರರಿಗೆ ಆರೋಗ್ಯ ಉಚಿ ತಪಾಸಣೆ ನಡೆಸಲಾಯಿತು. ಈ ಸಂದರ್ಭ ಟ್ರಾನ್ಸ್ ಫಾರ್ಮಿಂಗ್ ಟುಮಾರೋ ಫೌಂಡೇಶನ್‌ನ ಸಂಸ್ಥಾಪಕ ಆನಂದ್, ಡಾ. ಬಿ.ಹೆಚ್.ಮೇಘ, ಸಿಬ್ಬಂದಿ ವೀರಮ್ಮ, ಮತ್ತು ಬಹುಜನ ಕಾರ್ಮಿಕ ಸಂಘದ ಸದಸ್ಯರಾದ ಭವ್ಯ, ಕುಸುಮಾವತಿ, ಗಣೇಶ್, ಜ್ಯೋತಿ, ಯಮುನಾ, ಚಿನ್ನಿ, ಗೌರಿ, ದಿನೇಶ್, ಜೋಯ್ಯಿ ಮತ್ತಿತರರು ಇದ್ದರು.
ಅಮ್ಮತ್ತಿ ನಿವೇಶನ ಹೋರಾಟ ಸಮಿತಿಯ ಅಧ್ಯಕ್ಷ ಪಾಪಣ್ಣ ಅವರು ಮಾತನಾಡಿ, ನಿವೇಶನಕ್ಕಾಗಿ ಆಗ್ರಹಿಸಿ ಕಳೆದ 31 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅಧಿಕಾರಿಗಳಾಗಲೀ, ಕ್ಷೇತ್ರದ ಶಾಸಕರಾಗಲೀ ಭೇಟಿ ನೀಡಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಹೊನ್ನಪ್ಪ ಅವರು ಮಾತನಾಡಿ, ಗಾಳಿ ಮಳೆಯನ್ನು ಲೆಕ್ಕಿಸದೆ ಅಹೊ ರಾತ್ರಿ ಹೋರಾಟ ನಡೆಸುತ್ತಿದ್ದು ಮಳೆಯಿಂದಾಗಿ ಬಹಳ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಳಲು ತೋಡಿಕೊಂಡರು.
ಹೋರಾಟಗಾರ್ತಿ ಪುಷ್ಪಾ ಅವರು ಮಾತನಾಡಿ, ಕಳೆದ 31 ದಿನದಿಂದ ಹೋರಾಟ ನಡೆಸುತ್ತಿದ್ದೇವೆ ಎಷ್ಟೇ ಕಷ್ಟ ಬಂದರೂ, ನಿವೇಶನ ದೊರೆಯದೆ ನಾವು ಇಲ್ಲಿಂದ ತೆರಳುವುದಿಲ್ಲವೆಂದು ದೃಢವಾಗಿ ನುಡಿದರು.
ಹೋರಾಟಗಾರ್ತಿ ಗೌರಿ ಅವರು ಮಾತನಾಡಿ, ಹೋರಾಟದಲ್ಲಿ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದು, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡರು.ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಸಮಿತಿ ಸದಸ್ಯ ಹಾಗೂ ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಾದೇಶ್ ಅವರು ಮಾತನಾಡಿ, ಧಾರಾಕಾರ ಮಳೆಯಿಂದಾಗಿ ಹೋರಾಟಗಾರರು ಬಹಳ ತೊಂದರೆ ಅನುಭವಿಸುತ್ತಿದ್ದು, ಟಿ. ಟಿ. ಎಫ್ ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣೆ ನಡೆಸಿದ್ದು, ಸರಕಾರದ ವತಿಯಿಂದ ಮಾಡಬೇಕಾಗಿರುವ ಕೆಲಸವನ್ನು ಒಂದು ಖಾಸಗಿ ಸಂಸ್ಥೆ ಮಾಡಿದೆ ಎಂದು ಹೇಳಿದರು.
ವರದಿ: ಚಂಪಾ ಗಗನ, ಪೊನ್ನಂಪೇಟೆ.