ಪೊನ್ನಂಪೇಟೆ: ಆನೆ ದಾಳಿಯಿಂದ ಮೃತಪಟ್ಟ ಅಣ್ಣಯ್ಯ ಮನೆಗೆ ಎ.ಎಸ್ ಪೊನ್ನಣ್ಣ ಭೇಟಿ:

ಪೊನ್ನಂಪೇಟೆ: ಆನೆ ದಾಳಿಯಿಂದ ಮೃತಪಟ್ಟ ಅಣ್ಣಯ್ಯ ಮನೆಗೆ ಎ.ಎಸ್ ಪೊನ್ನಣ್ಣ ಭೇಟಿ:
ಪೊನ್ನಂಪೇಟೆ: ಆನೆ ದಾಳಿಯಿಂದ ಮೃತಪಟ್ಟ ಅಣ್ಣಯ್ಯ ಮನೆಗೆ ಎ.ಎಸ್ ಪೊನ್ನಣ್ಣ ಭೇಟಿ:

ಪೊನ್ನಂಪೇಟೆ:ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ದೇವರಪುರ ಗ್ರಾಮದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಅಣ್ಣಯ್ಯ ರವರ ಮನೆಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭೇಟಿ ನೀಡಿದರು. ಮೃತನ ಮನೆಯವರಿಗೆ ಸಾಂತ್ವನ ಹೇಳಿದ ಶಾಸಕರು, ಇಂತಹ ಅವಘಡಗಳು ಸಂಭವಿಸದಂತೆ ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಸದಾ ಜಾಗೃತರಾಗಿ ಇರಬೇಕೆಂದು ಸಲಹೆ ನೀಡಿದರು. ಮೃತರ ಮನೆಯವರಿಗೆ ಧೈರ್ಯ ತುಂಬಿದ ಶಾಸಕರು, ಸರಕಾರದಿಂದ ಸಿಗುವ ಪರಿಹಾರ ಮೊತ್ತ ಈಗಾಗಲೇ ಭಾಗಶಹ ಮನೆಯವರಿಗೆ ಸಿಕ್ಕಿರುವುದನ್ನು ಖಚಿತಪಡಿಸಿಕೊಂಡು ಉಳಿದ ಮೊತ್ತವನ್ನು ಅತಿ ಶೀಘ್ರದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಸರಕಾರದಿಂದ ನೀಡುವಂತಹ ಮತ್ತಷ್ಟು ಸೌಲಭ್ಯಗಳನ್ನು ಕುಟುಂಬದವರಿಗೆ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಮೃತರ ಮನೆಗೆ ತೆರಳುವ ಹಾದಿ ಅತ್ಯಂತ ದುಸ್ತರವಾಗಿರುವುದನ್ನು ಗಮನಿಸಿದ ಶಾಸಕರು ಕೂಡಲೇ ಇಲ್ಲಿ ಉತ್ತಮ ರಸ್ತೆ ನಿರ್ಮಿಸಲು ತಾವು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಆಸುಪಾಸಿನ ನಿವಾಸಿಗಳು ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಸಲ್ಲಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್,ದೇವರಪುರ ವಲಯ ಅಧ್ಯಕ್ಷರಾದ ಬಸಂತ್,ಪಕ್ಷದ ಮುಖಂಡರು,ಅರಣ್ಯಅಧಿಕಾರಿಗಳು ಹಾಗೂಪ್ರಮುಖರು ಉಪಸ್ಥಿತರಿದ್ದರು.