ಪೊನ್ನಂಪೇಟೆ:ಸ್ವಂತ ಖರ್ಚಿನಲ್ಲೇ ಮರ ಕಡಿದು ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಸದಸ್ಯ

ಪೊನ್ನಂಪೇಟೆ:ಸ್ವಂತ ಖರ್ಚಿನಲ್ಲೇ   ಮರ ಕಡಿದು ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಸದಸ್ಯ

ಪೊನ್ನಂಪೇಟೆ (Coorgdaily):ಪ್ರಸಕ್ತ ಸಾಲಿನ ಪೂರ್ವ ಮುಂಗಾರಿನ‌ ಗಾಳಿ- ಮಳೆಯ ರಭಸಕ್ಕೆ ವಿರಾಜಪೇಟೆ ತಾಲೂಕಿನಲ್ಲಿ ಮರಬಿದ್ದು, ಇಬ್ಬರು ಸಾವನ್ನಪ್ಪಿ, ಅಲ್ಲಲ್ಲಿ ಮನೆಗಳ ಮೇಲೆ ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು, ಹಾನಿ ಸಂಭವಿಸುತ್ತಿರುವ ಘಟನೆ ವರದಿಯಾಗುತ್ತಿರುವ ಬೆನ್ನಲ್ಲೇ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಬೃಹತ್ ಗಾತ್ರದ ಮರವೊಂದು ಒಣಗಿ ನಿಂತು ಬೀಳುವ ಸ್ಥಿತಿಯಲ್ಲಿತ್ತು. ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ಈ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ಮೆಸೆಜ್ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಆಲೀರ ಅಬ್ದುಲ್ ಅಸೀಸ್ ತಮ್ಮ ಸ್ವಂತ ಖರ್ಚಿನಲ್ಲಿ ಮರದ ರೆಂಬೆಗಳನ್ನು ಕಡಿದು ಸಂಭವನೀಯ ಅಪಾಯವನ್ನು ತಡೆಗಟ್ಟಿದ್ದು, ಆಲೀರ ಅಬ್ದುಲ್ ಅಸೀಸ್ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  

ಈ ಸಂದರ್ಭ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶಾಜಿ ಅಚ್ಚುತನ್ ಅವರು ಮಾತನಾಡಿ, ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವಾಯ್ಸ್ ಮೆಸೇಜ್ ಹರಿದಾಡುತ್ತಿದ್ದು, ಅದನ್ನು ಗಮನಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿಡಿಯೋ ಚಿತ್ರಿಕರಿಸಿ ಪೊನ್ನಂಪೇಟೆ ಪಟ್ಟಣ ಪಂಚಾಯತ್ ಗ್ರೂಪ್‌ನಲ್ಲಿ ಸಂದೇಶ ರವಾನಿಸಿದ ಮೇರೆಗೆ ಪಟ್ಟಣ ಪಂಚಾಯಿತಿಯ ಸದಸ್ಯ ಆಲೀರ ಅಬ್ದುಲ್ ಅಸೀಸ್ ಅವರು ಕೂಡಲೇ ಸ್ಪಂದಿಸಿ ತಮ್ಮ ಸ್ವಂತ ಹಣದಿಂದಲೇ ಮರವನ್ನು ತೆರವು ಗೊಳಿಸುವ ಕಾರ್ಯ ಮಾಡಿದ್ದಾರೆ ಎಂದರು.

ವರದಿ:-ಚೆಪ್ಪುಡಿರ ರೋಷನ್, ಪೊನ್ನಂಪೇಟೆ.