ಬಲ್ಯಮುಂಡೂರು: 800 ವರ್ಷಗಳ ಇತಿಹಾಸವಿರುವ ಶ್ರೀ ಭದ್ರಕಾಳಿ ದೇವರ ಬೋಡ್ ನಮ್ಮೆ

ಪೊನ್ನಂಪೇಟೆ(Coorgdaily daily):-ತಾಲೂಕಿನ ಬಲ್ಯಮುಂಡೂರು ಗ್ರಾಮದ 800 ವರ್ಷಗಳ ಇತಿಹಾಸವಿರುವ ಶ್ರೀ ಭದ್ರಕಾಳಿ ದೇವರ ಬೋಡ್ ನಮ್ಮೆ ಭಾರೀ ಮಳೆಯ ನಡುವೆಯೂ ವಿಜೃಂಭಣೆಯಿoದ ಜರುಗಿತು. ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಬಲ್ಯಮುಂಡೂರು ಗ್ರಾಮದ ಬೋಡ್ ನಮ್ಮೆ ಊರು ತಕ್ಕರಾದ ಕೊಟ್ಟಂಗಡ ಕಟ್ಟಿ ಪೆಮ್ಮಯ್ಯ ನೇತೃತ್ವದಲ್ಲಿ, ಶ್ರೀ ಭದ್ರಕಾಳಿ ದೇವರ ಸಮ್ಮುಖದಲ್ಲಿ ಮಣ್ಣಿನಿಂದ ಮಾಡಿದ ನಾಯಿಯ ಆಕಾರದ ಮೂರ್ತಿಯನ್ನು ಗ್ರಾಮಸ್ಥರೆಲ್ಲ ಸೇರಿ ಅಯ್ಯಪ್ಪ ದೇವರಿಗೆ ಒಪ್ಪಿಸುವ ಮೂಲಕ ಬೇಡು ಹಬ್ಬಕ್ಕೆ ಚಾಲನೆ ನೀಡಲಾಯಿತು.
ಸೋಮವಾರ ಹಾಗೂ ಮಂಗಳವಾರ ನಡೆದ ಹಬ್ಬದಲ್ಲಿ ಗ್ರಾಮಸ್ಥರೆಲ್ಲ ಊರಿನ ದೇವರ ಅಂಬಲದಲ್ಲಿ ಸೇರಿ ಸಾಂಪ್ರದಾಯಿಕ ಬೋಡ್ ನಮ್ಮೆ ಹಾಡಿನೊಂದಿಗೆ ವಿವಿಧ ವೇಷಧಾರಿಗಳ ಜೊತೆ ಮನೆ ಕಳಿ ಹೊರಟು ಮಾಚಿಮಾಡ ಹಾಗೂ ಕೊಟ್ಟಂಗಡ ಕುಟುಂಬಸ್ಥರ ಬಲ್ಯಮನೆಗಳಿಗೆ ಮನೆಕಳಿ ನಡೆಯಿತ್ತು. ಊರಿನವರೆಲ್ಲ ಮಂಗಳವಾರ ಬೆಳಿಗ್ಗೆ ಹತ್ತಿರದ ಮಾರಿ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಎರುಚಾಟ ನಡೆಯಿತು. ಇಲ್ಲಿ ಮಹಿಳೆಯರಿಗೆ ಸೇರಿದಂತೆ ಹೊರಗಿನ ಭಕ್ತರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ, ಆದರೆ, ಮುಕ್ತವಾಗಿ ಕುಣಿಯಲು ಕೆಸರು ಎರಚದಂತೆ ಅವಕಾಶ ಮಾಡಿಕೊಡಲಾಗುವುದು. ಮಧ್ಯಾಹ್ನದ ಬಳಿಕ ಮಾಚಿಮಾಡ ಕುಟುಂಬದ ಐನ್ ಮನೆಯಿಂದ ಹಾಗೂ ಕೊಟ್ಟಂಗಡ ಕುಟುಂಬಸ್ಥರ ಬಲ್ಯ ಮನೆಯಿಂದ ಶೃಂಗರಿಸಲಾದ ಎರಡು ಮೊಗದೊಂದಿಗೆ ಹೊರಟು, ಮಾರಿ ದೇವರ ದೇವಸ್ಥಾನ ಸಮೀಪವಿರುವ ಅಂಬಲದಲ್ಲಿ ವಿವಿಧ ವೇಷಧಾರಿಗಳು ಸೇರಿದಂತೆ ಮೊಗಗಳ ಸಮಾಗಮಗೊಂಡಿತು. ಬಳಿಕ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಅರ್ಚಕರಿಂದ ವಿವಿಧ ಪೂಜಾ ವಿಧಿ ವಿಧಾನ ಹಾಗೂ ಆಚರಣೆಗಳ ಬಳಿಕ ಹಬ್ಬಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ಊರಿನ ದೇವಸ್ಥಾನಗಳ ಅಧ್ಯಕ್ಷ ಕೊಟ್ಟಂಗಡ ಡಿಕ್ಕಿ ನಾಣಯ್ಯ, ಕಾರ್ಯದರ್ಶಿ ಕೊಟ್ಟಂಗಡ ಪ್ರಕಾಶ್, ಸಹಕಾರ್ಯದರ್ಶಿ ಮಾಚ್ಚಿಮಾಡ ಧೀರಜ್, ಕೊಟ್ಟಂಗಡ ಕಾಶಿ, ಅಯ್ಯಪ್ಪ, ದೆಯಂಡ ಸಂತೋಷ್, ಲಾಲ, ಚಂಡಂಗಡ ಪ್ರವೀಣ್, ಉಪ್ಪಂಗಡ ಹರೀಶ್, ಪೆಮ್ಮಂಡ ಧನು, ಪಿ.ಕೆ.ಪೊನ್ನಪ್ಪ, ಗಣೇಶ್, ಡಾಲಿ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು, ಮತ್ತಿತರು ಹಾಜರಿದ್ದರು.
ವರದಿ: ಚಂಪಾ ಗಗನ, ಪೊನ್ನಂಪೇಟೆ