ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿಗೆ ಸನ್ಮಾನ
ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಲಾಯಿತು.ಮಡಿಕೇರಿ ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ಬುಧವಾರ ಭೇಟಿ ನೀಡಿದ ಕೊಡಗು ಪ್ರೆಸ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ.ಬಿ.ಅಯ್ಯಪ್ಪ ಮಾತನಾಡಿ, ದೀಪಾ ಭಾಸ್ತಿ ಅವರು ಕಾಲೇಜಿನ ದಿನಗಳಿಂದಲೇ ಪರಿಚಿತರು, ಇಂದು ಕನ್ನಡದ ಹಣತೆ ವಿಶ್ವ ಮಟ್ಟದಲ್ಲಿ ರಾರಾಜಿಸುತ್ತಿದೆ ಎಂದರೆ ಅದಕ್ಕೆ ದೀಪಾ ಭಾಸ್ತಿ ಅವರ ಕೊಡುಗೆಯೂ ಬಹು ಮುಖ್ಯ ಕಾರಣವಾಗಿದೆ. ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ಭಾಷೆಯನ್ನು ವಿಶ್ವ ಮಟ್ಟದಲ್ಲಿ ತಲೆ ಎತ್ತಿನಿಲ್ಲುವಂತೆ ದೀಪಾಭಾಸ್ತಿ ಮಾಡಿದ್ದಾರೆ ಎಂದರು.
ದೀಪಾ ಭಾಸ್ತಿ ಅವರು ಭಾನುಮುಷ್ತಾಕ್ ಅವರ ಕಥಾಸಂಕಲನ ಓದಿ ತನಗೆ ಇಷ್ಟವಾದ ೧೨ ಕಥೆಗಳನ್ನು ಆಯ್ದೆಕೊಂಡು ಹಾರ್ಟ್ ಲ್ಯಾಂಪ್ ಕೃತಿ ರಚಿಸಿದ್ದಾರೆ. ಅನುವಾದ ಎಂಬುದು ಸುಲಭದ ಕೆಲಸವಲ್ಲ. ಮೂಲ ಕೃತಿಯ ರೀತಿಯಲ್ಲಿ ತರ್ಜುಮೆ ಮಾಡಬೇಕಾಗುತ್ತದೆ. ಇದೇ ರೀತಿಯಲ್ಲಿ ಮತ್ತಷ್ಟು ಕೃತಿಗಳು ಅನುವಾದ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಮಾತನಾಡಿ, ದೀಪಾ ಭಾಸ್ತಿ ಅವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಯಾವುದೇ ಕೃತಿಯನ್ನು ಕನ್ನಡದಿಂದ ಇಂಗ್ಲೀಷ್ ಭಾಷೆ ಅನುವಾದ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ದೀಪಾ ಭಾಸ್ತಿಯವರ ಶ್ರಮ ಮತ್ತು ಸಾಹಿತ್ಯದ ಮೇಲಿನ ಆಸಕ್ತಿಯಿಂದ ಬೂಕರ್ ಪ್ರಶಸ್ತಿಗೆ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಕೊಡಗು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ವಿಶ್ಮ ಪೆಮ್ಮಯ್ಯ, ಎಚ್.ಜೆ.ರಾಕೇಶ್, ಕ್ಲಬ್ ಸದಸ್ಯರಾದ ಚಂದನ್ ನಂದರಬೆಟ್ಟು ಪಾಲ್ಗೊಂಡಿದ್ದರು.