ಮೂರ್ನಾಡು: ತಲೆಯ ಮೇಲೊಂದು ಸೂರಿಗಾಗಿ ಪೆಗ್ಗೊಲ್ಲಿಯಲ್ಲಿ 213 ದಿನಗಳಿಂದ ನಿರಂತರ ಹೋರಾಟ!

ಮೂರ್ನಾಡು: ತಲೆಯ ಮೇಲೊಂದು ಸೂರಿಗಾಗಿ ಪೆಗ್ಗೊಲ್ಲಿಯಲ್ಲಿ 213 ದಿನಗಳಿಂದ ನಿರಂತರ ಹೋರಾಟ!
ಮೂರ್ನಾಡು: ತಲೆಯ ಮೇಲೊಂದು ಸೂರಿಗಾಗಿ ಪೆಗ್ಗೊಲ್ಲಿಯಲ್ಲಿ 213 ದಿನಗಳಿಂದ ನಿರಂತರ ಹೋರಾಟ!

ವರದಿ:-ಚೆಪ್ಪುಡಿರ ರೋಷನ್, ಪೊನ್ನಂಪೇಟೆ

ಮೂರ್ನಾಡು: ಜಿಲ್ಲೆಯ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪೆಗ್ಗೋಲ್ಲಿ ಎಂಬಲ್ಲಿ 49/3 ಸರ್ವೇ ನಂಬರಿನ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಕೊಡಗು ಹೊದ್ದೂರು ಗ್ರಾಮದ ನಿವೇಶನ ರಹಿತರ ಅಹೋರಾತ್ರಿ ಪ್ರತಿಭಟನೆ 214 ನೇ ದಿನಕ್ಕೆ ಕಾಲಿರಿಸಿದೆ. ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ 300 ಕುಟುಂಬಗಳು, ಮೂರ್ನಾಡು ಪಂಚಾಯತಿಯಲ್ಲಿ 300 ಆದಿವಾಸಿ ಹಾಗೂ ದಲಿತ ಕುಟುಂಬಗಳು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಪುಟ್ಟ ಮಕ್ಕಳೊಂದಿಗೆ ವಯೋವೃದ್ಧರು ಸೇರಿ ಮಹಿಳೆಯರು, ಪುರುಷರು ತಾತ್ಕಾಲಿಕ ಶೆಡ್ ಅನ್ನು ನಿರ್ಮಿಸಿ ಕಳೆದ ಏಳು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಶ್ವತ ನಿವೇಶನ ವ್ಯವಸ್ಥೆ ಕಲ್ಪಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. ಮಡಿಕೇರಿ ತಾಲೂಕು ತಹಸಿಲ್ದಾರ್ ಅವರು ಕಳೆದ ನವಂಬರ್ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ ಇದುವರೆಗೂ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಆಲಿಸಲಿಲ್ಲವೆಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ತಮ್ಮ ದಿನನಿತ್ಯದ ಬಳಕೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ತಮ್ಮ ಕೈಯಿಂದ ಹಣ ಹಾಕಿಕೊಂಡು ಪೈಪ್ ಲೈನ್ ಅಳವಡಿಸಿಕೊಂಡಿದ್ದಾರೆ.

ಈ ಸಂದರ್ಭ ಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಅವರು ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಪೆಗ್ಗೊಲ್ಲಿ ಹೋರಾಟ 213 ನೇ ದಿನ ಕಳೆದರೂ ಯಾರೊಬ್ಬರು ಶಾಸಕರಾಗಲಿ, ಸಂಬಂಧಪಟ್ಟ ಅಧಿಕಾರಿಯಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೊದ್ದೂರು ಗ್ರಾಮ ಪಂಚಾಯತಿಯಲ್ಲಿ 300 ಕುಟುಂಬಗಳು ಮತ್ತು ಮೂರ್ನಾಡು ಗ್ರಾಮ ಪಂಚಾಯಿತಿಯಲ್ಲಿ 300 ಕುಟುಂಬಗಳು ನಿವೇಶನ ರಹಿತರ ಪಟ್ಟಿಯಲ್ಲಿದ್ದು ನಿವೇಶನ ದೊರಕಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದೆವು. ಹೋರಾಟದ ಆರಂಭದ ದಿನಗಳಲ್ಲಿ ತಹಶೀಲ್ದಾರ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಿವೇಶನ ದೊರಕಿಸಿ ಕೊಡುವಂತೆಯೇ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೂ ಕೊಡಗು ಜಿಲ್ಲಾಡಳಿತ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ. ಹೋರಾಟ ಆರಂಭವಾಗಿ ಏಳು ತಿಂಗಳು ಕಳೆದರೂ ಹಲವು ಬಾರಿ ಮನವಿ ಪತ್ರ ನೀಡಿದರು ಶಾಸಕರು ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ. ಹೊದ್ದೂರು ಗ್ರಾಮ ಪಂಚಾಯಿತಿಯವರು ಹಾಗೂ ಮುರ್ನಾಡು ಗ್ರಾಮ ಪಂಚಾಯಿತಿಯವರು ನಿವೇಶನ ರಹಿತರ ಪಟ್ಟಿಯಲ್ಲಿ ಬಡವರ ಹೆಸರುಗಳನ್ನು ಸೇರಿಸದೆ ನಿರ್ಲಕ್ಷ ತೋರುತ್ತಿದ್ದಾರೆ. ಶಾಸಕರು ಇತ್ತ ಗಮನಹರಿಸಿ ಈ ಕೂಡಲೇ ಬಡವರಿಗೆ ನಿವೇಶನ ರಹಿತರಿಗೆ ಯೋಗ್ಯವಾದ ಸ್ಥಳವನ್ನು ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು.

ಬಹುಜನ ಕಾರ್ಮಿಕ ಸಂಘದ ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷ ಕಿರಣ್ ಜಗದೀಶ್ ಮಾತನಾಡಿ, ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 49/3 ಸರ್ವೇ ನಂಬರಿನ ಜಾಗದಲ್ಲಿ ಕಳೆದ ಏಳು ತಿಂಗಳಿನಿಂದ ಅಹೋರಾತ್ರಿ ನಿರಂತರ ಹೋರಾಟ ನಡೆಸಿಕೊಂಡು ಬರುತಿದ್ದರು ಬಡವರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ದೊರಕಿಸಿ ಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಿಗೆ ಹಲವಾರು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದು ಯಾವುದೇ ರೀತಿಯ ಸ್ಪಂದನೆ ದೊರೆತಿರುವುದಿಲ್ಲ. ರಾಜಕೀಯ ಮುಖಂಡರು ಚುನಾವಣಾ ಸಮಯದಲ್ಲಿ ಮಾತ್ರ ತಮ್ಮ ಮನೆ ಮನೆಗಳಿಗೆ ಬಂದು ಮತಯಾಚಿಸುತ್ತಾರೆ. ಹೋರಾಟಗಾರರು ಮಳೆ ಗಾಳಿಯನ್ನು ಲೆಕ್ಕಿಸದೆ ನಿವೇಶನ ದೊರೆಯುವವರೆಗೂ ತಳ ಬಿಟ್ಟು ತೆರಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದೇವೆ. ತೀವ್ರವಾದ ಮಳೆಗಾಳಿಯ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಅನಾಹುತಗಳು ನಡೆದಲ್ಲಿ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತಾರೆ ಎಂದು ಹೇಳಿದರು. ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರಕಾರಿ ಭೂಮಿಯನ್ನು ಸರಕಾರವೆ ಹಿಂಪಡೆದು ನಿವೇಶನ ರಹಿತರಿಗೆ ನಿವೇಶನ ದೊರಕಿಸಿಕೊಡಬೇಕು. ಬದುಕಲು ಯೋಗ್ಯವಾದ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗೆ ಸ್ಥಳ ಗುರುತಿಸಿ ಕೊಡುವಂತೆ ಮನವಿ ಮಾಡಿದರು.

 ಈ ಸಂದರ್ಭ ಹೋರಾಟ ಸಮಿತಿಯ ಅಧ್ಯಕ್ಷ ಸಂಜೀವ, ಉಪಾಧ್ಯಕ್ಷೆ ಸುಜಾತ, ಪ್ರಧಾನ ಕಾರ್ಯದರ್ಶಿ ಚೋಂದಮ್ಮ, ಉಪ ಕಾರ್ಯದರ್ಶಿ ಮಂಜುಳ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.