ವಿದ್ಯಾರ್ಥಿಗಳು ಬಹುಮುಖಿಯಾಗಿ ಪಡೆದುಕೊಂಡ ಜ್ಞಾನವನ್ನು ಸಮಾಜಮುಖಿಯಾಗಿ ವಿನಿಯೋಗ ಮಾಡಿ: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ

ವಿದ್ಯಾರ್ಥಿಗಳು ಬಹುಮುಖಿಯಾಗಿ ಪಡೆದುಕೊಂಡ ಜ್ಞಾನವನ್ನು ಸಮಾಜಮುಖಿಯಾಗಿ ವಿನಿಯೋಗ ಮಾಡಿ: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ

ಕುಶಾಲನಗರ: ವಿದ್ಯಾರ್ಥಿಗಳು ಬಹುಮುಖಿಯಾಗಿ ಪಡೆದುಕೊಂಡ ಜ್ಞಾನವನ್ನು ಸಮಾಜಮುಖಿಯಾಗಿ ವಿನಿಯೋಗ ಮಾಡಿದಾಗ ಮಾತ್ರ ಶಿಕ್ಷಣಕ್ಕೊಂದು ಪರಿಪೂರ್ಣತೆ ಲಭಿಸಿದಂತೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯಿಸಿದರು.

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಸೋಮವಾರಟಪೇಟೆಯ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರ -2025 ರ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯ ಜೊತೆಗೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರದಾದ್ಯಂತ ಭಾವೈಕ್ಯತೆಯ ಚಿಂತನೆಯನ್ನು ಮೂಡಿಸಲು ನಮ್ಮ ಜ್ಞಾನ, ಕ್ರಿಯೆ, ವಿಷಯ ಮತ್ತು ಅನುಭವಗಳನ್ನು ಸಮಾಜದ ಮುಖ್ಯ ವಾಹಿನಿಗೆ ತಲುಪಿಸುವಂತಹ ಕೆಲಸಗಳು ನಡೆಯಬೇಕು. ಏಳು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವಂತಹ ವಿಶೇಷ ಉಪನ್ಯಾಸಗಳನ್ನು ಆಲಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಶಿಸ್ತು ಮತ್ತು ಬದ್ಧತೆಯಿಂದ ನಡೆ-ನುಡಿಗಳನ್ನೊಂದಾಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪ್ರತಿ ದಿನ ಆತ್ಮಾವಲೋಕನ ಮಾಡಿಕೊಳ್ಳುವಂತಹ ಅಗತ್ಯತೆ ಇದೆ. ಮಾದರಿ ವ್ಯಕ್ತಿತ್ವವನ್ನು ರೂಪಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಗೊಂಡಾಗ ಮಾತ್ರ ಶಿಬಿರಗಳಿಗೆ ಅದರದೇ ಆದ ಪ್ರಾಮುಖ್ಯತೆ ದೊರೆತಂತ್ತಾಗುತ್ತದೆ. ಯುವ ಸಮುದಾಯವು ನಮ್ಮ ದೇಶದ ಸಂಪತ್ತು. ಸಮಾಜ, ಕುಟುಂಬ, ರಾಜ್ಯ, ರಾಷ್ಟ್ರ, ವಿಶ್ವವಿದ್ಯಾಲಯಗಳ ಗೌರವನ್ನು ಕಾಪಾಡುವಂತಹ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.

ಕೊಡಗು ವಿಶ್ವವಿದ್ಯಾಲಯದ ಅಸ್ತಿತ್ವದ ಬಗೆಗೆ ಯಾವುದೇ ಗೊಂದಲುಗಳು ಬೇಡ. ಸಾರ್ವಜನಿಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಅಂತಹ ಯಾವುದೇ ಊಹಾಪೋಹಗಳಿಗೆ ಅವಕಾಶ ಕೊಡಬಾರದು. ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವಂತಹ ಯಾವುದೇ ಚಿಂತನೆಗಳು ಸರ್ಕಾರದ ಮುಂದಿಲ್ಲ. ನಮ್ಮ ಕೊಡಗು ವಿಶ್ವವಿದ್ಯಾಲಯವು ಯುಜಿಸಿ ೨ (ಎಫ್) ಮಾನ್ಯತೆ ಪಡೆದಿರುವುದರಿಂದ ಒಂದು ವಿಶ್ವವಿದ್ಯಾಲಯಕ್ಕೆ ಬೇಕಾಗಿರುವಂತಹ ಎಲ್ಲಾ ಸಮಾನ ಸ್ಥಾನಮಾನಗಳನ್ನು ಹೊಂದಿದೆ. ಅದರ ಜೊತೆಗೆ ಅಂತರ್‌ರಾಷ್ಟ್ರೀಯ ಹೆಸರಾಂತ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಲ್ಲಾ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಕೌಶಲ್ಯಾಧಾರಿತ ಶಿಕ್ಷಣ, ಔದ್ಯೋಗಿಕ ಸಹಕಾರ ನೀಡುವಂತಹ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಲಾಗುವುದು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕ ನಾಪಂಡ ಮುತ್ತಪ್ಪ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೀವು ಶ್ರಮವಹಿಸಿದರೆ ಜೀವನಪೂರ್ತಿ ಸುಖವಾಗಿರುತ್ತೀರಿ. ಈ ಶಿಬಿರದ ಅನುಭವಗಳನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸರ್ಕಾರದ ಗುರಿ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್, ಗೌರವ ಉಪಸ್ಥಿತರಿದ್ದ ಕುಲಸಚಿವರು (ಮೌಲ್ಯಮಾಪನ) ಡಾ. ಸುರೇಶ್ ಎಂ ಹಾಗೂ ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಹರ್ಷ ಬಿ.ಡಿ. ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಿಡಿಸಿ ಸದಸ್ಯರಾದ ಸುಶೀಲ ಹಾನಗಲ್ಲು, ಕೊಡಗು ವಿಶ್ವವಿದ್ಯಾಲಯದ ಕಾರ್ಯಕ್ರಮ ಯೋಜನಾಧಿಕಾರಿಗಳಾದ ಡಾ.ಗುಣಶ್ರೀ ಬಿ.ಎಸ್., ವಿಶೇಷ ಶಿಬಿರದ ಶಿಬಿರಾಧಿಕಾರಿಗಳಾದ ಎಂ.ಎಸ್. ಶಿವಮೂರ್ತಿ, ಹುಚ್ಚೇಗೌಡ ಹೆಚ್., ಸಹ ಪ್ರಾಧ್ಯಾಪಕರಾದ ಸುನೀತ ಎಂ.ಎಂ, ಕೊಡಗು ವಿವಿಯ ಬೋಧಕ ಮತ್ತು ಬೋಧಕೇತರ ವೃಂದ ಹಾಗೂ ಶಿಬಿರಾರ್ಥಿಗಳು ಉಸ್ಥಿತರಿದ್ದರು.