ವಿರಾಜಪೇಟೆ: ತಡೆಗೋಡೆ ಕುಸಿತ, ತನಿಖೆಗೆ ಆದೇಶ ಮಾಡಿದ ಶಾಸಕ ಎ.ಎಸ್ ಪೊನ್ನಣ್ಣ

ವಿರಾಜಪೇಟೆ(Coorgdaily): ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವು ಭಾಗಗಳಲ್ಲಿ ಹಾನಿ ಉಂಟಾಗಿತ್ತು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಇಂದು ವಿವಿಧ ಅಧಿಕಾರಿಗಳೊಂದಿಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ವಿರಾಜಪೇಟೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯ ( ಎಸ್.ಬಿ.ಐ) ಮುಂಭಾಗದ ರಸ್ತೆ ಬದಿಯಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನದ ಸನಿಹದ ತಡೆಗೋಡೆಯು ಮಳೆಯ ಪರಿಣಾಮ ಕುಸಿತ ಕಂಡಿತ್ತು. ಶಾಸಕರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕುಸಿತಗೊಂಡ ತಡೆಗೋಡೆಯನ್ನು ವೀಕ್ಷಣೆ ಮಾಡಿದರು. ತಡೆಗೋಡೆ ನಿರ್ಮಾಣದ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಕರೆಯ ಮೂಲಕ ಮಾಹಿತಿ ಬಯಸಿದ್ದರು. ಬಳಿಕ ಪತ್ರಿಕೆಯೊಂದಿಗೆ ಕುಸಿತಗೊಂಡ ತಡೆಗೋಡೆಯ ಬಗ್ಗೆ ಮಾತನಾಡಿದ ಶಾಸಕರು ದಿನಾಂಕ 20-05-2025 ರ ಭಾರಿ ಮಳೆಯ ಪರಿಣಾಮ ತಡೆಗೋಡೆ ಕುಸಿತಕಂಡಿದೆ. ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ವಿಧಾನ ಪರಿಷತ್ ಸದಸ್ಯರ ಅನುದಾನ 05 ಲಕ್ಷ ಮತ್ತು ಸಂಸದರ ಅನುಧಾನ 05 ಲಕ್ಷ ದೊಂದಿಗೆ ತಡೆಗೋಡೆ ನಿರ್ಮಾಣವಾಗಿದೆ, ಗುತ್ತಿಗೆದಾರರಿಗೆ ನೇರಹಣ ನೀಡಲಾಗಿ ಗೋಡೆ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಕುಸಿತಗೊಂಡ ತಡೆಗೋಡೆಯ ಕಾಮಗಾರಿಯ ಬಗ್ಗೆ ಇಲಾಖೆಯ ಅಧಿಕಾರಿಗಳಲ್ಲಿ ಉತ್ತರವಿಲ್ಲದಾಗಿದೆ. ಇದರ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿರಾಜಪೇಟೆ ತಾಲೂಕು ತಹಶಿಲ್ದಾರ್ ಅನಂತ ಶಂಕರ್, ಪುರಸಭೆಯ ಸದಸ್ಯರಾದ ಪಟ್ಡಡ ರಂಜಿ ಪೂಣಚ್ಚ, ಅಬ್ದುಲ್ ಜಲೀಲ್ ವಿ.ಆರ್. ರಜನಿಕಾಂತ್, ಅಬೇಂಡ್ಕರ್ ಭವನ ನಿರ್ವಾಹಣ ಸಮಿತಿ ಸದಸ್ಯರಾದ ಹೆಚ್.ಎಂ. ಮಹದೇವ, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ