ವಿರಾಜಪೇಟೆ: ಬೀದಿ ದೀಪ,ವಿದ್ಯುತ್ ಕಂಬ,ಕಣ್ಮರೆ: ಪುನರ್ ಅಳವಡಿಸಲು ಗ್ರಾಮಸ್ಥರ ಆಗ್ರಹ

ವಿರಾಜಪೇಟೆ: ಬೀದಿ ದೀಪ,ವಿದ್ಯುತ್ ಕಂಬ,ಕಣ್ಮರೆ:  ಪುನರ್ ಅಳವಡಿಸಲು ಗ್ರಾಮಸ್ಥರ ಆಗ್ರಹ

ವಿರಾಜಪೇಟೆ: ಸುಮಾರು 20 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಬೀದಿ ದೀಪ, ವಿದ್ಯುತ್ ಕಂಬ ತಂತಿಗಳನ್ನು ಇಲಾಖೆಯು ಏಕಾಏಕಿಯಾಗಿ ತೆರವುಗೊಳಿಸಿ ಗ್ರಾಮದ ವಾಸಿಗಳನ್ನು ಕತ್ತಲಲ್ಲಿ ವಾಸಿಸುವಂತೆ ಮಾಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರಾಟ್ ಅಯ್ಯಪ್ಪ ದೇವಾಲಯದ ದೇವರ ಕಾಡು, ಹರಿಜನ ಕಾಲೋನಿಗೆ ತೆರಳುವ ಮುಖ್ಯರಸ್ತೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೊಡವ ಸಮಾಜ, ಹಾಗೂ ಗ್ರಾಮ ಪಂಚಾಯಿತಿಗೆ ತೆರಳುವ ಮುಖ್ಯರಸ್ತೆಯ ಭಾಗಗಳಲ್ಲಿ ವಾಸ ಮಾಡುವ ಸುಮಾರು ೪೫-೫೦ ಮನೆ ವಾಸಿಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಇಲ್ಲಿ ವೋಲ್ಟೇಜ್ ಸಮಸ್ಯೆ, ಬೀದಿ ದೀಪ ಇಲ್ಲದಿರುವುದರಿಂದ ಕಳ್ಳರು, ಸಮಸ್ಯೆ, ದೇವ ಕಾಡು ಭಾಗದಲ್ಲಿ ಪುಂಡರ ಅನೈತಿಕ ಚಟುವಟಿಕೆ ಸೇರಿಂದತೆ ಗಾಂಜಾ ವ್ಯಸನಿಗಳ ಕಾಟ ಎದುರಾಗಿದೆ. ರಾತ್ರಿ ಪಾಳಯದಲ್ಲಿ ಮಹಿಳೆಯರು, ಶಾಲಾ ಕಾಲೇಜು , ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಭಯದ ಭೀತಿ ನಿರ್ಮಾಣವಾಗಿದೆ. ಈ ಹಿಂದೆ ಕುಗ್ರಾಮ ಸುಗ್ರಾಮ ಯೋಜನೆ ಅಡಿಯಲಿ ಅಂದರೆ ೨೦೦೫ ರಲ್ಲಿ ಸರ್ಕಾರವು ವಿದ್ಯುತ್ ಕಂಬಗಳನ್ನು ಅಳವಡಿಸಿ ಬೀದಿ ದೀಪ ಅಳವಡಿಸಿತ್ತು. ನಂತರದಲ್ಲಿ ಇಲಾಖೆ ಮನೆಗಳ ಸಂಖ್ಯೆ ವಿರಳ ಎಂದು ಪರಿಗಣಿಸಿ ಬೀದಿ ದೀಪ ಸೇರಿದಂತೆ ಕಂಬ ಹಾಗೂ ತಂತಿಯನ್ನು ತರವುಗೊಳಿಸಿದ್ದಾರೆ. ಸುಮಾರು ೨೦ ವರ್ಷಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತಿದ್ದೇವೆ. ವಿದ್ಯುತ್‌ಚಕ್ತಿ ಇಲಾಖೆಗೆ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿದರು ಪರಿಹಾರಕ್ಕೆ ಇಲಾಖೆಯು ಮುಂದಾಗಿರುವುದಿಲ್ಲಾ ಎಂದು ಗ್ರಾಮಸ್ಥರು ಮತ್ತು ಕೊಡವ ಸಮಾಜದ ಕಾರ್ಯದರ್ಶಿ ಅಲ್ಲಪ್ಪಿರ ಎಂ. ಕಾರ್ಯಪ್ಪ ಅವರು ಆರೋಪಿಸಿದರು.

ರಾಜ ತಿಮ್ಮಯ್ಯ ಮಾತನಾಡಿ, ಮನೆ ಮನೆಗೂ ವಿದ್ಯುತ್ ಸಂಪರ್ಕವಿದ್ದರು ವೊಲ್ಟೇಜ್ ಸಮಸ್ಯೆ ಕಾಡುತ್ತಿದೆ. ಗ್ರಾಮದ ಹಲವು ಮನೆಗಳಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗಿದೆ. ಕುಡಿಯುವ ನೀರು ತುಂಬಿಸಲು ರಾತ್ರಿ ೧೨ ಗಂಟೆಯ ವರೆಗೆ ಕಾಯುವ ಪರಿಸ್ಥಿತಿಯಾಗಿದೆ. ರಸ್ತೆಯ ಬದಿಯಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬ, ತಂತಿ ಹಾಗೂ ಬೀದಿ ದೀಪಗಳನ್ನು ಇಲಾಖೆಯು ತೆರವುಗೊಳಿಸಿದೆ.ಇದರಿಂದ ರಾತ್ರಿ ಹೊತ್ತಿನಲ್ಲಿ ರಸ್ತೆಯಲ್ಲಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಇಲಾಖೆಯಿಂದ ಪ್ರತಿಸ್ಪಂದನೆ ದೊರಕದಾಗಿದೆ ಎಂದು ಆರೋಪಿಸಿದರು. ಇಲಾಖೆಯು ಈ ಭಾಗದಲ್ಲಿ ವಿದ್ಯುತ್ ಕಂಬ, ತಂತಿ ಪುನರ್ ಆಳವಡಿಸಬೇಕು ಎಂದು ಹೇಳಿದರು.

ಮೂಕಂಡ ಅರುಣ ಗಣಪತಿ ಮಾತನಾಡಿ, ಬೀದಿ ದೀಪಗಳು ಇಲ್ಲದಿರುವುದರಿಂದ ಕಾಡಾನೆಗಳ ಉಪಟಳ ಹಚ್ಚಾಗಿದೆ. ಈ ಹಿಂದೆ ಬೀದಿ ದೀಪಗಳಿದ್ದ ವೇಳೆ ಕಾಡಾನೆಗಳ ಸಂಚಾರ ವಿರಳವಾಗಿತ್ತು. ಇದೀಗ ಕಾಡಾನೆಗಳ ಉಪಟಳಗಳೊಂದಿಗೆ ಹುಲಿ ಹಾಗೂ ವನ್ಯಮೃಗಗಳ ಉಪಟಳ ಹೆಚ್ಚಾಗಿದ್ದು ಕಾಫಿ ತೋಟಗಳು ಬಾಳೆಗಿಡ ಹಾಗೂ ಇನ್ನಿತರ ಬೆಳೆಗಳು ಕೈಗೆಎಟುಕದಾಂತಾಗಿದೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.

ಚೆಸ್ಕಾಮ್ ಅಭಿಯಂತರಾದ ಪಿ.ಎಸ್. ಸುರೇಶ್ ಮಾತನಾಡಿ, ತಾಲೂಕಿನ ವಿವಿಧ ಭಾಗಗಳಲ್ಲಿ ಮೂರು ಫೇಸ್ ವಿದ್ಯುತ್ ತಂತಿಗಳ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಭಾಗದಲ್ಲಿ ಎಲ್.ಟಿ. ಲೈನ್ ಕಡಿತಗೊಳಿಸಲಾಗಿದೆ. ಇಲಾಖೆಯಿಂದ ಹೊಸದಾಗಿ ಲೈನ್ ಬಳಸಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಗ್ರಾಮ ಪಂಚಾಯಿತಿಯಿಂದ ವಿದ್ಯುತ್ ದೀಪ ಅಳವಡಿಸಬಹುದಾಗಿದೆ. ವೋಲ್ಟೇಜ್ ಸಮಸ್ಯೆಗೆ ಹೊಸದಾಗಿ ಪರಿವರ್ತಕ ಅಳವಡಿಸಿದಲ್ಲಿ ಸಮಸ್ಯೆ ನೀಗಿಸಲಾಗುವುದು. ಗ್ರಾಮದ ಸಮಸ್ಯೆಯ ಬಗ್ಗೆ ಸಿಬ್ಬಂದಿಗಳಿಂದ ವರದಿ ಪಡೆದು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ, ಬೀದಿದೀಪ, ಕಂಬ ತಂತಿ ಅಳವಡಿಸುವುದು, ಹಾಗೂ ಪರಿವರ್ತಕ ಅಳವಡಿಸುವುದು ಎಂದು ವಿದ್ಯುತ್ ಸಮಸ್ಯೆಯನ್ನು ಒಂದು ತಿಂಗಳ ಗಡವು ಇಲಾಖೆಗೆ ನೀಡುತಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದಲ್ಲಿ ಇಲಾಖೆಯ ಕಛೇರಿಯ ಮುಂಭಾಗದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಹೆಚ್.ಕೆ.ಭೀಮಣಿ, ಮಾಜಿ ಸೈನಿಕರಾದ ನೆಲ್ಲಚಂಡ ಚೆಂಗಪ್ಪ, ಮೂಕಂಡ ಸಂಪತ್ ದೇವಯ್ಯ. ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ.