ದೇವರಪುರ: ಕಾಡಾನೆ ದಾಳಿಗೆ ಮೃತಪಟ್ಟ ಅಣ್ಣಯ್ಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಂಕೇತ್ ಪೂವಯ್ಯ

ದೇವರಪುರ: ಕಾಡಾನೆ ದಾಳಿಗೆ  ಮೃತಪಟ್ಟ ಅಣ್ಣಯ್ಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಂಕೇತ್ ಪೂವಯ್ಯ

ಪೊನ್ನಂಪೇಟೆ : ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ ದೇವರಕಾಡು ಪೈಸಾರಿ ನಿವಾಸಿ ಅಣ್ಣಯ್ಯ ಎಂಬುವರು ಕಾಡಾನೆ ದಾಳಿಯಿಂದಾಗಿ ಸಾವನ್ನಪ್ಪಿದ ಘಟನೆ ತಿಳಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಮಾರ್ಗದರ್ಶನದಂತೆ ರಾಜ್ಯ ವನ್ಯಜೀವಿ ಘಟಕದ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರು ಬುಧವಾರ ರಾತ್ರಿ 9.30 ಗಂಟೆಗೆ ಬೆಂಗಳೂರಿನಿಂದ ಘಟನಾ ಸ್ಥಳಕ್ಕೆ ಆಗಮಿಸಿ, ಮೃತ ಅಣ್ಣಯ್ಯ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. 

ಈ ಸಂದರ್ಭ ಮಾತನಾಡಿದ ಅವರು, ಕಾಡಾನೆಗಳ ಸಮಸ್ಯೆ ಕುರಿತು ಶಾಸಕ ಎ.ಎಸ್.ಪೊನ್ನಣ್ಣ ಅವರು, ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಈಗಾಗಲೇ ಕಾಡಾನೆಗಳನ್ನು ಪುನರ್ವಸತಿ ಮಾಡತಕ್ಕಂತಹ ಕೆಲಸಕ್ಕೆ ಮುಂದಾಗಿದ್ದೇವೆ. ಈ ಭಾಗದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ವೇದಾ ಎನ್ನುವ ಆನೆಯನ್ನು ಕೂಡ ಸೆರೆ ಹಿಡಿಯಲು ಶಾಸಕರು ಅನುಮತಿ ಕೊಡಿಸಿ ಸೆರೆ ಹಿಡಿದು ದುಬಾರೆ ಶಿಬಿರದಲ್ಲಿ ಅದನ್ನು ಪುನರ್ವಸತಿ ಮಾಡಿದ್ದೇವೆ. ಈ ಕಾಡಾನೆಯನ್ನು ಎರಡು ಮೂರು ಬಾರಿ ಕಾಡಿಗಟ್ಟುವ ಪ್ರಯತ್ನ ಮಾಡಿದ್ದರು ಸಹ ಮತ್ತೆ ಬರುತ್ತಿದೆ. ಶಾಸಕ ಪೊನ್ನಣ್ಣ ಅವರು ಅರಣ್ಯ ಸಚಿವರ ಜೊತೆ ಮಾತನಾಡಿ ಇದನ್ನು ಕೂಡ ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಬಿಡುವಂತೆ ಚರ್ಚೆ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅನುಮತಿ ಸಿಗುತ್ತದೆ. ಈ ಕಾಡಾನೆಯನ್ನು ಕೂಡ ಸೆರೆ ಹಿಡಿಯುವಂತ ಕೆಲಸ ಆಗುತ್ತದೆ, ಕಾಡಾನೆಗಳು ನಾಡಿಗೆ ಬರದಂತೆ ಈಗಾಗಲೇ 21 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಶಾಸಕರು ತಂದಿದ್ದಾರೆ ಎಂದರು.

ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರು ಮಾತನಾಡಿ, ಕಾಡಾನೆಯನ್ನು ಟ್ರ‍್ಯಾಕ್ ಮಾಡಿದ್ದೇವೆ. ಮಧ್ಯಾಹ್ನ ಸಮಯದಲ್ಲಿ ಕಾಡಿಗೆ ಅಟ್ಟಿದ್ದೇವೆ, ಈ ಭಾಗದಲ್ಲಿ ಹಬ್ಬ ನಡೆಯುತ್ತಿರುವುದರಿಂದ ನಾವು ಬೆಳಿಗ್ಗೆ ಸಮಯದಲ್ಲಿ ನೋಡಿದ್ದೇವೆ ಆದರೆ ನಮಗೆ ಕಾಡಾನೆ ಇರುವುದು ಕಂಡುಬರಲಿಲ್ಲವೆಂದರಲ್ಲದೆ, ಘಟನಾ ಸ್ಥಳಕ್ಕೆ ಎಸಿಎಫ್, ಹಾಗೂ ಡಿ ಎಫ್ ಓ ಸಮೇತ ಭೇಟಿ ನೀಡಿದ್ದಾರೆ, ಇಲಾಖಾ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಕೊಡುವಂತ ವ್ಯವಸ್ಥೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹಬ್ಬ ನಡೆಯುತ್ತಿರುವುದರಿಂದ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಎರಡು ದಿನದ ನಂತರ ಕಾಡಾನೆಯನ್ನು ಕಾಡಿಗಟ್ಟುವ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಈ ಸಂದರ್ಭ ತಿತಿಮತಿ ಡಿ ಆರ್ ಎಫ್ ಓ ಪ್ರಶಾಂತ್ ಮತ್ತಿತರರು ಇದ್ದರು.

ವರದಿ:ಚಂಪಾ ಗಗನ, ಪೊನ್ನಂಪೇಟೆ.