ಮಲೆನಾಡಿನಲ್ಲಿ ಮಳೆರಾಯನ ಆರ್ಭಟ: ಸಕಲೇಶಪುರ: ರಣ ಮಳೆಗೆ ಕಾಣದ ರಸ್ತೆ:ಇಬ್ಬರು ಯುವಕರು ಸಾವು
admincoorgdaily
ಸಕಲೇಶಪುರ: ಭಾರೀ ಮಳೆಗೆ ರಸ್ತೆ ಮೇಲೆ ನಿಂತಿದ್ದ ನೀರು ಕಾಣದೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಸಮೀಪ ಸೋಮವಾರ ನಡೆದಿದೆ. ಬೆಂಗಳೂರು ಮೂಲದ ಅಭಿಷೇಕ್ (27) ಶರತ್ (28) ಮೃತರು. ರಾಜಶೇಖರ್ ಮತ್ತು ಸಂದೀಪ್ ಗಾಯಾಳುಗಳು.
ಬೆಂಗಳೂರು ಮೂಲದ ನಾಲ್ವರು ಯುವಕರು ಎರಿಟಿಗಾ ಕಾರಿನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆ ಸರಿಯಾಗಿ ಕಾಣಿಸದೆ, ರಸ್ತೆ ಮಧ್ಯದಲ್ಲಿ ನಿಂತಿದ್ದ ನೀರಿನ ಮೇಲೆ ಹಾದು ಹೋಗಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಕಬ್ಬಿಣದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅಭಿಷೇಕ್ ಮತ್ತು ಶರತ್ ಸ್ಥಳದಲ್ಲೇ ಮೃತಪಟ್ಟು, ರಾಜಶೇಖರ್, ಸಂದೀಪ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.