ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ 14 ನೇ ವಾರ್ಷಿಕ ಮಹಾಸಭೆ

Jul 13, 2026 - 19:03
 0  127
ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ 14 ನೇ ವಾರ್ಷಿಕ ಮಹಾಸಭೆ

ಮಡಿಕೇರಿ : ಕೊಡಗು ಜಿಲ್ಲೆಯ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14 ನೇ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕೊಡವ ಸಮಾಜದಲ್ಲಿ ನೆರವೇರಿತು. ಕೊಡಗು ಜಿಲ್ಲೆ. ಸಭೆಯ ಆರಂಭದಲ್ಲಿ ಮೃತ ಪಟ್ಟ ಒಕ್ಕೂಟದ ಸದಸ್ಯರಿಗೆ ಸಂತಾಪ ಕೋರಲಾಯಿತು.

ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆಯ ಹಾಲೀ ಹಾಗೂ ಮಾಜಿ ಯೋಧರಿದ್ದಾರೆ. ಈ ಪೈಕಿ 850 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಒಕ್ಕೂಟ ಆರಂಭವಾಗಿ 13 ವರ್ಷಗಳು ಕಳೆದಿವೆ. ಮಡಿಕೇರಿಯ ಮಹದೇವಪೇಟೆಯ ಬಾಡಿಗೆ ಕಟ್ಟಡದಲ್ಲಿ ಸಂಘದ ಕಛೇರಿ ತೆರೆಯಲಾಗಿದೆ. ಆದಾಗ್ಯೂ ಇದೂವರೆಗೂ ಪ್ರತ್ಯೇಕವಾಗಿ ಅರೆಸೇನಾಪಡೆಯ ಯೋಧರ ಸ್ಮಾರಕ ಭವನ, ಕ್ಯಾಂಟೀನ್ ವ್ಯವಸ್ಥೆ ಹಾಗು ಕಛೇರಿಯ ಅವಶ್ಯವಿದ್ದು, ಕುಶಾಲನಗರದ ಮುಳ್ಳುಸೋಗೆಯ ಸರ್ವೆ ನಂಬರ್ 11/1 ರಲ್ಲಿ 55 ಸೆಂಟು ಸರ್ಕಾರದ ಜಾಗವನ್ನು ಗುರುತಿಸಲಾಗಿದೆ.

ಈ ಸಂಬಂಧ ಅರೆಸೇನಾಪಡೆ ಯೋಧರ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸದರಿ ಜಾಗದ ಒತ್ತುವರಿದಾರರು ನಮ್ಮ ಯೋಧರ ಸಂಘದ ಪದಾಧಿಕಾರಿ ಜಿ.ಕೆ.ದಿನೇಶ್ ಕುಮಾರ್ ಸೇರಿದಂತೆ ಯೋಧರ ಒಕ್ಕೂಟಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೂ ದಾವೆ ಹೂಡಿರುವುದು ಸರಿಯಲ್ಲ ಎಂದು ಸಭಾಧ್ಯಕ್ಷ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ಎಂ.ಚೆಂಗಪ್ಪ ಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದರಲ್ಲದೇ ದೇಶ ಸೇವೆ ಮಾಡಿ ತವರಿಗೆ ಮರಳಿದ ಅರೆಸೇನಾಪಡೆ ಯೋಧರಿಗೆ ನ್ಯಾಯ ಯುತವಾಗಿ ಸಿಗಬೇಕಾದ ಭೂಮಿ ನೀಡದೇ ತೊಂದರೆ ಕೊಡುತ್ತಿರುವುದು ವಿಪರ್ಯಾಸ ಎಂದು ಅವರು ಬೇಸರ ವ್ಯಕ್ತಪಡಿಸಿದರು.

 ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಪ್ರಯೋಜನ ಹಾಗೂ ಬಳಕೆಯ ಕುರಿತು ಸಭಾಧ್ಯಕ್ಷ ಯತೀಶ್ ಮಾಹಿತಿ ನೀಡಿದರು. ದಶಕಗಳ ಕಾಲ ದೇಶದ ಗಡಿಗಳಲ್ಲಿ ಜೀವನ ಹಂಗು ತೊರೆದು ಸೇವೆ ಮಾಡಿ ಬಂದ ಯೋಧರಿಗೆ ಸರ್ಕಾರದ ನಿವೇಶನವನ್ನು ಪಡೆಯಲು ಹೋದರೆ ಒತ್ತುವರಿದಾರರು ಅನಗತ್ಯ ದೂರು ದಾಖಲಿಸಿರುವುದು ಸಮಂಜಸವಲ್ಲ ಎಂದು ಯೋಧರ ಒಕ್ಕೂಟದ ಜಿ.ಕೆ.ದಿನೇಶ್ ಕುಮಾರ್ ಹಾಗೂ ನೂರೇರಾ ಎಂ.ಭೀಮಯ್ಯ ಬೇಸರ ವ್ಯಕ್ತಪಡಿಸಿದರು.

ಮಹಾಸಭೆಯಲ್ಲಿ ಅರೆಸೇನಾಪಡೆಯ ಮಾಜಿ ಯೋಧರಾದ 80 ರ ಹರೆಯದ ಬಿ.ಡಿ.ಗೋಪಾಲ, ಎಂ.ಎ.ಪೂಣಚ್ಚ, ಸಿ.ಜೆ.ಬೋಪಯ್ಯ, ಪಿ.ಎಂ.ಪೂವಯ್ಯ, ಎಂ.ಕೆ.ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಮಾಜಿ ಯೋಧ ಮರ್ವಿನ್ ಕೊರಿಯಾ ಅವರು 60 ಸಾವಿರ ಮೌಲ್ಯದ ಗಣಕ ಯಂತ್ರವನ್ನು ಉಚಿತವಾಗಿ ಒಕ್ಕೂಟಕ್ಕೆ ನೀಡಿದರು.

 ಇದೇ ಸಂದರ್ಭ ಯೋಧರ ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾದರು. ಪುಟ್ಟೇಗೌಡ, ಮನೋಹರ, ಲೋಕೇಶ್, ತಿಮ್ಮಯ್ಯ,ಹರೀಶ್ ಕುಮಾರ್ ಗೌಡ, ನಳಿನಿ, ಗೋಪಾಲಕೃಷ್ಣ, ಅಶೋಕ್, ಕಾರ್ಯಪ್ಪ, ಪಿ.ಎಂ.ಲೋಕೇಶ್, ಕುದುಪಜೆ ಚಂದ್ರೇಶ್ ಇದ್ದರು. ಒಕ್ಕೂಟದ ನಿರ್ದೇಶಕ ಬಿ.ಎನ್.ರಾಜಶೇಖರ್ ಸ್ವಾಗತಿಸಿದರು. ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ ಪ್ರಾಸ್ತಾ ವಿಕ ನುಡಿಗಳಾಡಿದರು. ಕಾರ್ಯದರ್ಶಿ ಬಿ.ಎಂ.ರವೀಂದ್ರ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ತಂಗಮ್ಮ ನಿರೂಪಿಸಿದರು. ನಿರ್ದೇಶಕಿ ಎಸ್.ಎಸ್.ಲೀಲಾವೇಣಿ ವಂದಿಸಿದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0