ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ | 55.88 ಕೋಟಿ ರೂ. ಮೌಲ್ಯದ MDMA ಸೀಝ್; ಕೆಮಿಕಲ್ ಇಂಜಿನಿಯರ್ ಮಾಸ್ಟರ್ ಮೈಂಡ್ ಶಂಕೆ
ಬೆಂಗಳೂರು, ಡಿ. 29: ಮಹಾರಾಷ್ಟ್ರದ ಎಎನ್‌ಟಿಎಫ್, ಬೆಂಗಳೂರು ಪೊಲೀಸರು ಹಾಗೂ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ನಗರದಲ್ಲಿನ ಮೂರು ಸ್ಥಳಗಳಲ್ಲಿ ಅಕ್ರಮ ಡ್ರಗ್ಸ್ ಫ್ಯಾಕ್ಟರಿಗಳು ಪತ್ತೆಯಾಗಿದ್ದು, ಸುಮಾರು 55.88 ಕೋಟಿ ರೂ. ಮೌಲ್ಯದ MDMA ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದ್ದು, ಆತ ಕೆಮಿಕಲ್ ಇಂಜಿನಿಯರ್ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಡ್ರಗ್ಸ್ ತಯಾರಿಕೆಗೆ ಅಗತ್ಯವಾದ ರಾಸಾಯನಿಕಗಳ ಸಾಗಣೆ ಮತ್ತು ಫಾರ್ಮುಲಾ ಒದಗಿಸುವಲ್ಲಿ ಪ್ರಶಾಂತ್ ಪ್ರಮುಖ ಪಾತ್ರ ವಹಿಸಿದ್ದಾನೆಯೇ ಎಂಬ ಕುರಿತು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರ್‌ಜೆ ಇವೆಂಟ್ ಹೆಸರಿನಲ್ಲಿ ಫ್ಯಾಕ್ಟರಿ ನಡೆಸಲಾಗುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು, 4.1 ಕೆಜಿ ಘನ MDMA, 17 ಕೆಜಿ ದ್ರವ MDMA ಸೇರಿ ಒಟ್ಟು 21.4 ಕೆಜಿ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾಜಸ್ಥಾನ ಮೂಲದ ಉದ್ಯಮಿಗಳಾದ ಯೋಗಿರಾಜ್ ಕುಮಾರ್ ಮತ್ತು ನಯಾನ್ ಈ ಡ್ರಗ್ಸ್ ಜಾಲದ ಕಿಂಗ್‌ಪಿನ್‌ಗಳಾಗಿದ್ದು, ಫ್ಯಾಕ್ಟರಿಗೆ ಅಗತ್ಯವಿದ್ದ ಯಂತ್ರೋಪಕರಣಗಳು ಹಾಗೂ ಕಟ್ಟಡ ವ್ಯವಸ್ಥೆ ಒದಗಿಸಿದ್ದರೆಂದು ಶಂಕಿಸಲಾಗಿದೆ. ರಾಮಲಾಲ್ ಬಿಷ್ಣೋಯ್ ಡ್ರಗ್ಸ್ ತಯಾರಿಕೆಯಲ್ಲಿ ತೊಡಗಿದ್ದರೆ, ಯರಪ್ಪನಹಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಸರಬರಾಜು ಮಾಡುತ್ತಿದ್ದ ಅಬ್ದುಲ್ ಎಂಬಾತನ ಪಾತ್ರದ ಕುರಿತೂ ತನಿಖೆ ಮುಂದುವರಿದಿದೆ.
ಪೊಲೀಸರ ಕಣ್ಣಿಗೆ ಬೀಳದಂತೆ ಕಾರ್ಯಾಚರಣೆ ನಡೆಸಲು ಆರೋಪಿಗಳು ಸೂಕ್ಷ್ಮ ಯೋಜನೆ ರೂಪಿಸಿಕೊಂಡಿದ್ದರು. ಅವಲಹಳ್ಳಿ, ಬಾಗಲೂರು ಹಾಗೂ ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲೇ, ಪರಸ್ಪರ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಫ್ಯಾಕ್ಟರಿ ಹಾಗೂ ಗೋಡೌನ್ ಗಳನ್ನು ಸ್ಥಾಪಿಸಲಾಗಿತ್ತು. ಗಸ್ತು ಕಡಿಮೆ ಇರುವ ನಿರ್ಜನ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡು ಡ್ರಗ್ಸ್ ಉತ್ಪಾದನೆ ನಡೆಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ಪೊಲೀಸರ ಸ್ಪಷ್ಟನೆ
ಈ ಕಾರ್ಯಾಚರಣೆ ಕೇವಲ ಮಹಾರಾಷ್ಟ್ರ ಪೊಲೀಸರದ್ದಲ್ಲ; ಬೆಂಗಳೂರು ಪೊಲೀಸರು ಮತ್ತು ಎನ್‌ಸಿಬಿಯ ಜಂಟಿ ಕಾರ್ಯಾಚರಣೆ ಎಂದು ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಯರಪ್ಪನಹಳ್ಳಿ ಗ್ರಾಮದ ಮನೆಯೊಂದರಲ್ಲಿ 4.2 ಕೆಜಿ ಮೆಫೆಡೋನ್, 17 ಕೆಜಿ ದ್ರವ ರೂಪದ ಕಚ್ಚಾ ವಸ್ತು, ಹಾಗೂ ತಯಾರಿಕಾ ಉಪಕರಣಗಳನ್ನು ಸೀನಝ್ ಮಾಡಲಾಗಿದೆ. ಬಾಗಲೂರು ಪ್ರದೇಶದ ಶೆಡ್ ನಲ್ಲಿದ್ದ ಕಚ್ಚಾ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ.
ಪರಿಶೀಲನೆ ವೇಳೆ ಕೆಲವು ಮಾದಕ ವಸ್ತುಗಳಲ್ಲಿ ಅಶುದ್ಧತೆ ಕಂಡುಬಂದಿದ್ದು, ವಶಪಡಿಸಿಕೊಂಡ ಮೆಫೆಡೋನ್ ಮೌಲ್ಯವನ್ನು ಸುಮಾರು 1.2 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
