ವಿರಾಜಪೇಟೆಯಲ್ಲಿ ಯಶಸ್ವಿಯಾಗಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ
ವಿರಾಜಪೇಟೆ: ವಿರಾಜಪೇಟೆ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ವಿರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಭಕ್ತಿ ಭಾವ, ಸಂಸ್ಕಾರ ಹಾಗೂ ಶಿಸ್ತಿನೊಂದಿಗೆ ವೈಭವಯುತವಾಗಿ ನಡೆಯಿತು.
ತೆಲುಗರ ಬೀದಿಯಲ್ಲಿನ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಸಮಾಜದ ಮುಖಂಡರು ಚಾಲನೆ ನೀಡಿದರು.
ನಗರದ ಮುಖ್ಯಬೀದಿಗಳಿಂದ ಹೊರಟ ಹಿಂದೂ ಸಂಗಮದ ಬೃಹತ್ ಶೋಭಾಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಅದ್ದೂರಿಯಾಗಿ ನಡೆದ ಶೋಭಾತ್ರೆಯಲ್ಲಿ ಸಾವಿರಾರು ಜನಸಾಗರ ಸೇರಿ ಶಿಸ್ತುಬದ್ಧ ವ್ಯವಸ್ಥೆ, ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಸಂಘ ಶತಾಭ್ದಿ ಸಂಭ್ರಮದ ಭಾಗವಾಗಿ ನಡೆದ ಈ ಕಾರ್ಯಕ್ರಮ ವಿರಾಜಪೇಟೆಯ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುವಂತಾಯಿತು. ಭವ್ಯ ಶೋಭಾಯಾತ್ರೆ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಭಜನಾ ತಂಡಗಳು, ಡೊಳ್ಳು ಕುಣಿತ ಕಲಾವಿದರು, ಜೇನುಕುರುಬ ನೃತ್ಯ, ಉಮ್ಮತ್ತಾಟ್ ಪ್ರದರ್ಶನ, ದೇಶಭಕ್ತಿಯನ್ನು ಸಾರುವ ವೈವಿಧ್ಯಮಯ ಟ್ಯಾಬ್ಲೋಗಳು, ಕೇರಳದ ಚಂಡೆ, ಕೊಡಗಿನ ವಾಲಗ, ಗೊಂಬೆ ಕುಣಿತ ಸಮ್ಮುಖದಲ್ಲಿ ಕಳಸ ಹೊತ್ತು ಮಹಿಳೆಯರು ಮೆರವಣಿಯಲ್ಲಿ ಭಾಗಿಯಾಗಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿ ಎಲ್ಲರ ಗಮನ ಸೆಳೆಯುವ ಕ್ಷಣವಾಗಿತ್ತು. ಹಿಂದೂಗಳು ಪೂಜ್ಯನೀಯ ಭಾವದಿಂದ ಕಾಣುವ ಗೋವುಗಳ ಮೆರವಣಿಗೆ ಸಂಸ್ಕೃತಿಯ ಪ್ರತೀಕದಂತೆ ಎಲ್ಲರ ಗಮನ ಸೆಳೆಯಿತು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು ಕೇಸರಿ ಶಲ್ಯ ಧರಿಸಿ, ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ವಿರಾಜಪೇಟೆ ನಗರ ತುಂಬೆಲ್ಲಾ ಬಂಟಿಂಗ್ಸ್ ಹಾಗೂ ಪ್ಲೆಕ್ಸ್ ರಾರಾಜಿಸಿದ್ದವು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕೃತಿಕ ನೃತ್ಯ ವೈಭವ ಆಕರ್ಷಣೀಯವಾಗಿತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ನೀರು, ತಂಪು ಪಾನೀಯ, ಮಜ್ಜಿಗೆ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ನೆರೆದಿದ್ದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಧರ್ಮದ ಏಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜಗಳು, ಧಾರ್ಮಿಕ ಘೋಷಣೆಗಳು ಹಾಗೂ ಶಿಸ್ತಿನ ಮೆರವಣಿಗೆಯ ಮೂಲಕ ಹಿಂದೂ ಧರ್ಮದ ಶಕ್ತಿ ಮತ್ತು ಒಗ್ಗಟ್ಟು ಗಮನ ಸೆಳೆಯಿತು. ಶೋಭಾಯಾತ್ರೆಗೆ ವಿರಾಜಪೇಟೆ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿತ್ತು. ಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶೋಭಾಯಾತ್ರೆ ನೋಡುವುದರ ಜೊತೆಗೆ ಯುವಕ ಯುವತಿರು ಕುಣಿದು ಕುಪ್ಪಳಿಸಿದರು.
ಡಿಜೆ ಸೌಂಡ್ ಇಲ್ಲದಿದ್ದರೂ ಕಲಾತಂಡಗಳ ವಾದ್ಯಕ್ಕೆ ಹೆಜ್ಜೆ ಹಾಕಿದರು. ಯುವಕ ಯುವತಿಯರು ಮಕ್ಕಳು ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ರಸ್ತೆಯುದ್ಧಕ್ಕೂ ಪೊಲೀಸರು ಬಿಗಿ ಬಂದೋಬಸ್ತೋ ಕಲ್ಪಿಸಿದ್ದರು. ಸ್ವಯಂಸೇವಕರ ತಂಡ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದರು. ಪಟ್ಟಣದ ಮೂರು ಕಡೆಗಳಿಂದ ಶೋಭಾಯಾತ್ರೆ ನಡೆಯಿತು. ಪಟ್ಟಣದ ತೆಲುಗುರ ಬೀದಿಯ ಮಾರಿಯಮ್ಮ ಗುಡಿಯಿಂದ, ಅದೇ ಸಮಯಕ್ಕೆ ಮೀನುಪೇಟೆ ಮುತ್ತಪ್ಪ ದೇವಾಲಯದಿಂದ ಒಂದು ತಂಡ, ಪಂಜರುಪೇಟೆ ಸರ್ವೋದಯ ಕಾಲೇಜಿನಿಂದ ಮತ್ತೊಂದು ತಂಡ ಏಕಕಾಲದಲ್ಲಿ ಶೋಭಾಯಾತ್ರೆ ಹೊರಟು ದೊಡಟ್ಟಿ ಚೌಕಿ ಬಳಿ ಮಹಾ ಸಂಗಮಗೊಂಡು ಎಫ್‌ಎಂಸಿ ರಸ್ತೆಯ ಮೂಲಕ ತಾಲೂಕು ಮೈದಾನದಲ್ಲಿ ಸೇರಿತು.
ಸಭಾ ಕಾರ್ಯಕ್ರಮ ತಾಲೂಕು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಗೋ ಸೇವಕ ಪ್ರಮುಖ್ ಪ್ರವೀಣ್ ಸರಳಾಯ ಮಾತನಾಡಿ ಪ್ರತಿಯೊಬ್ಬ ಹಿಂದೂ ನಾವೆಲ್ಲ ಒಂದು ಎಂಬ ಪರಿಕಲ್ಪನೆಯಲ್ಲಿ ಒಗ್ಗೂಡಬೇಕಾಗಿದೆ. ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆ ಹೇಳಿಕೊಟ್ಟಿದ್ದಾರೆ. ನಮ್ಮ ದೇಶ ಉಳಿಯಬೇಕೆಂದರೆ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದುಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಅವಿಭಕ್ತ ಕುಟುಂಬವೇ ಹಿಂದೂ ಧರ್ಮದ ದೊಡ್ಡ ಶಕ್ತಿ. ಕುಟುಂಬದಲ್ಲಿ ಯಾರು ಬೇರ್ಪಟ್ಟು ಹೋಗದೆ ಒಟ್ಟಾಗಿ ಬದುಕುವ ಸಂಸ್ಕಾರ ನಮ್ಮ ಧರ್ಮದ ಮೂಲ. ಇತ್ತೀಚಿನ ನಗರ ವ್ಯಾಮೋಹ ಹಾಗೂ ಆಧುನಿಕ ಜೀವನ ಶೈಲಿಯಿಂದ ಕುಟುಂಬ ವಿಚ್ಛೇದನ ಹೆಚ್ಚಾಗುತ್ತಿದೆ. ಇದು ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಾರಕವಾಗುವ ಅಪಾಯವಿದೆ. ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಮುಖ್ಯ ಅತಿಥಿ ಡಾ. ಮಾತಂಡ ಅಯ್ಯಪ್ಪ ಮಾತನಾಡಿ ನಮ್ಮ ಕಾರ್ಯಕ್ರಮ ಇರುವುದು ಯಾರ ವಿರುದ್ದ ಅಲ್ಲ. ನಾವೆಲ್ಲರೂ ಒಂದು ಸೇರಬೇಕು ಎಂಬ ಒಂದು ಸಂಕಲ್ಪಕಾಗಿ ನಾವು ಸೇರಬೇಕು. ನೂರು ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಹೆಗ್ಡೆವರ‍್ರವರ ಸಂಕಲ್ಪದಿAದ ಹಿಂದುಗಳ ಒಂದುಗೂಡಿಸುವ ಸಂಕಲ್ಪ ಬಂದದ್ದು. ಹಾಗೆ ಹುಟ್ಟಿಕೊಂಡ ಸಂಘ ನಮ್ಮದು. ಹಿಂದುತ್ವ ಅಂದರೆ ಭಾರತೀಯರ ವಿಶ್ವ ದೃಷ್ಟಿ, ಜೀವನ ದರ್ಶನ, ಭಾರತೀಯರ ನಡವಳಿಕೆ ಆಗಿದೆ. ಹಿಂದುತ್ವದಿಂದ ಭಾರತವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಎಲ್ಲವೂ ಹಿಂದೂ ಸಮಾಜ ಸಮ್ಮೇಳಿತವಾಗಿದೆ ಎಂದರು. ನಾವೆಲ್ಲರೂ ಹಿಂದುತ್ವದ ದೃಷ್ಟಿಯಲ್ಲಿ ಸಾಗೋಣ, ಹಿಂದುತ್ವಕ್ಕಾಗಿ ಸೇರೋಣ ನಾವೆಲ್ಲ ಹಿಂದುತ್ವದ ದೃಷ್ಟಿಯಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದ ಕೆಲವು ಪಿಡುಗುಗಳನ್ನು ಕಿತ್ತೆಸೆಯಲು ಸಾಧ್ಯ. ಇಂದು ದೇಶವನ್ನು ಕೆಲವು ಪಿಡುಗುಗಳು ಕಾಡುತ್ತಿವೆ. ಆದ್ದರಿಂದ ನಾವುಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಹಿಂದುತ್ವ ಜಾತಿಯಲ್ಲ, ಮತ, ಪಂಥವಲ್ಲ ಅದು ಮನುಷ್ಯನ ಜೀವನಕ್ಕೆ ಪೂರಕವಾದುದ್ದು. ಇಲ್ಲಿ ನಾವು ಸೇರಿರುವುದು ಯಾಕೆ ಎಂಬುದನ್ನು ತಿಳಿಯಬೇಕು ಎಂದರು. ಭಾರತ ದೇಶದಲ್ಲಿ ಭಾರತೀಯತೆ ಇದೆ. ಅದು ಸನಾತನ ಧರ್ಮದಲಿದೆ. ಹಿಂದೂ ಧರ್ಮದ ಆಳ ಅರಿವಿಲ್ಲದ ನಮ್ಮಲ್ಲಿ ಪರಿವರ್ತನೆ ಆಗಬೇಕು. ಧರ್ಮಕ್ಕೆ ಅಳಿವಿಲ್ಲ. ಆದರೆ ಪರಿವರ್ತನೆ ಅವಶ್ಯ ಸಮಾಜದಲ್ಲಿ ಅಸ್ಪೃಶ್ಯತೆ ನಾಶವಾಗಬೇಕು, ನಾವೆಲ್ಲರೂ ಹಿಂದೂ ಸಂರಕ್ಷಣೆಯ ಸೇನಾಧಿಗಳಾಗಬೇಕು ಸಂಘರ್ಷಕ್ಕೆ ಒಂದೇ ಉತ್ತರ ಅದು ಸಂಘಟನೆ. ದೇಶದ ಉಳಿವು ಯುವಕರು ಮತ್ತು ಮಾತೆಯರ ಕೈಯಲ್ಲಿದೆ. ಮನೆಯಲ್ಲಿ ದೇವರ ಕೋಣೆ ಹೇಗಿದೆಯೋ ಹಾಗೆ ಪ್ರಪಂಚಕ್ಕೆ ಭಾರತ ದೇಶ ಪವಿತ್ರ ದೇಶ ಎನ್ನುವ ಭಾವನೆ ಬರುವಂತಾಗಲಿ ಎಂದು ನುಡಿದರು.
ಪ್ರಮುಖರಾದ ಡಾ.ಚೇಂದಿರ ಬೋಪಣ್ಣ ಮಾತನಾಡಿ, ದೇಶದ ಕಠಿಣ ಸಂದರ್ಭಗಳಲ್ಲಿ ಆಸರೆಯಾಗಿ ನಿಂತ ಶಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂದು ಸಂಸ್ಕೃತಿಯು ವಿಕೃತಿಯತ್ತ ಸಾಗುತ್ತಿರುವ ಕಾಲಘಟ್ಟದಲ್ಲಿ ಸ್ತ್ರೀಯರಿಗೆ ಮತ್ತು ಸಮಾಜಕ್ಕೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಸಂಘದ ಪಾತ್ರ ಅಪಾರ ಎಂದರು. ಸಮಾಜದಲ್ಲಿ ಬದಲಾವಣೆ ತರಲು ಅಳವಡಿಸಿಕೊಳ್ಳಬೇಕಾದ ಜೀವನ ಶೈಲಿಯ ಬಗ್ಗೆ ಬೆಳಕು ಚೆಲ್ಲಿದರು. ಈ ದೇಶದ ಸಂಸ್ಕೃತಿ ಆಚಾರ ವಿಚಾರ ಉಳಿಯಬೇಕಾದರೆ ಮನೆಯಲ್ಲಿ ಮಹಿಳೆಯರು ಮೊದಲು ಆಚಾರವಂತರಾಗಬೇಕು. ಅದೇ ಮಾರ್ಗದಲ್ಲಿ ಮಕ್ಕಳನ್ನು ಬೆಳೆಸಬೇಕು. ಹಾಗಿದ್ದಾಗ ಮಾತ್ರ ಬದಲಾವಣೆ ಸಾಧ್ಯ. ಅದಕ್ಕಾಗಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಪಂಚ ಪರಿವರ್ತನೆ ಎಂಬ ಬದಲಾವಣೆಯ ಉದ್ದೇಶಕ್ಕೆ ಕೈ ಹಾಕಿದೆ. ಆ ಮೂಲಕ ನಮ್ಮಲ್ಲಿ ಸಮಾಜದಲ್ಲಿ ಬದಲಾವಣೆ ಆದರೆ ದೇಶದಲ್ಲಿ ಬದಲಾವಣೆ ಆಗುತ್ತಿದೆ. ಹಿಂದುಗಳು ಇಂದು ಸಂಘಟಿತರಾಗಬೇಕಾಗಿದೆ, ಜಾಗೃತರಾಗಬೇಕಾಗಿದೆ, ಇಲ್ಲವಾದಲ್ಲಿ ಮುಂದೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜದ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ ಧಾರ್ಮಿಕ ಮತ್ತು ರಾಷ್ಟಿçÃಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆದಿದೆ ಎಂದರು.
ವೇದಿಕೆಯಲ್ಲಿ ಸಹ ಸಂಚಾಲಕ ಹೇಮಂತ್, ಸಂಯೋಜಕಿ ಮನೆಯಪಂಡ ಕಾಂತಿ ಸತೀಶ್, ಸಂಯೋಜಕ ಅಂಜಪರವಂಡ ಅನೀಲ್ ಮಂದಣ್ಣ, ಸವಿತಾ ಸಮಾಜದ ಅಧ್ಯಕ್ಷ ವೆಂಕಟೇಶ್, ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಸಂಯೋಜಕಿ ಪಟ್ರಪಂಡ ಗೀತಾ ಬೆಳ್ಯಪ್ಪ, ಕೊಡವ ಸಮಾಜದ ಪರವಾಗಿ ಸಂಪಿ ಪೂಣಚ್ಚ, ಮಾಳೇಟಿರ ಶ್ರೀನಿವಾಸ್, ಕಾವೇರಿ ಆಶ್ರಮದ ಪ್ರಮುಖರಾದ ಪ್ರತಾಪ್ ಉಪಸ್ಥಿತರಿದ್ದರು.
ಈ ಸಂದರ್ಭ ಪಟ್ಟಡ ರೀನಾ ಪ್ರಕಾಶ್, ಸಹ ಸಂಯೋಜಕ ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಖಜಾಂಚಿ ಅಮ್ಮಣಿಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಸೇರಿದಂತೆ ಎಲ್ಲ ಹಿಂದೂ ಮುಖಂಡರುಗಳು, ಮತ್ತಿತರರಿದ್ದರು ಇದ್ದರು.