ಹೆಲಿಕಾಪ್ಟರ್‌ನಲ್ಲಿ ಹೃದಯ ಸಾಗಿಸಿ ನೇಪಾಳಿ ಯುವತಿಗೆ ಮರುಜೀವ ನೀಡಿದ ಕೇರಳದ ಸರ್ಕಾರಿ ಆಸ್ಪತ್ರೆ : ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೇಶದ ಮೊದಲ ತುರ್ತು ಹೃದಯ ಕಸಿ

Dec 23, 2025 - 10:10
 0  482
ಹೆಲಿಕಾಪ್ಟರ್‌ನಲ್ಲಿ ಹೃದಯ ಸಾಗಿಸಿ ನೇಪಾಳಿ ಯುವತಿಗೆ ಮರುಜೀವ ನೀಡಿದ ಕೇರಳದ ಸರ್ಕಾರಿ ಆಸ್ಪತ್ರೆ :  ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೇಶದ ಮೊದಲ ತುರ್ತು ಹೃದಯ ಕಸಿ

ಎರ್ನಾಕುಲಂ (ಕೇರಳ): ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೇರಳದ ಸರ್ಕಾರಿ ಆಸ್ಪತ್ರೆಯೊಂದು ಅಪೂರ್ವ ಸಾಧನೆ ಮಾಡಿದೆ. ತಿರುವನಂತಪುರದಿಂದ ಕೊಚ್ಚಿಗೆ ದಾನಿಯಿಂದ ಸಂಗ್ರಹಿಸಿದ ಹೃದಯವನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಿ, 22 ವರ್ಷದ ನೇಪಾಳಿ ಯುವತಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಹೃದಯ ಕಸಿ ನಡೆಸಿದ ದೇಶದ ಮೊದಲ ಘಟನೆ ದಾಖಲಾಗಿದೆ.

ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಮೆದುಳು ನಿಷ್ಕ್ರಿಯತೆಯಿಂದ ಮೃತಪಟ್ಟ ದಾನಿಯಿಂದ ಸಂಗ್ರಹಿಸಿದ ಹೃದಯವನ್ನು ರಾಜ್ಯ ಸರ್ಕಾರದ ಹೆಲಿಕಾಪ್ಟರ್‌ನಲ್ಲಿ ಮಧ್ಯಾಹ್ನ 2.50ರ ಸುಮಾರಿಗೆ ಕೊಚ್ಚಿಗೆ ತರಲಾಯಿತು. ಅಲ್ಲಿಂದ ‘ಜೀರೋ ಟ್ರಾಫಿಕ್’ ವ್ಯವಸ್ಥೆಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಎರ್ನಾಕುಲಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣವೇ ಹೃದಯ ಕಸಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು.

ಹೃದಯ ಕಸಿ ಪಡೆದ ಯುವತಿ ದುರಗಾ ಕಾಮಿ ಎಂಬ ನೇಪಾಳಿ ಪ್ರಜೆ. ಆಕೆ ಹೈಪರ್ಟ್ರೋಫಿಕ್ ಕಾರ್ಡಿಯೊಮಯೋಪತಿ ಎಂಬ ಅಪರೂಪದ ಹಾಗೂ ಆನುವಂಶಿಕ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾಯಿಲೆಯಿಂದ ಆಕೆಯ ತಾಯಿ ಹಾಗೂ ಅಕ್ಕ ಮೃತಪಟ್ಟಿದ್ದು, ಕುಟುಂಬದಲ್ಲಿ ಈಕೆ ಮತ್ತು ತಮ್ಮ ಮಾತ್ರ ಉಳಿದಿದ್ದಾರೆ. ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಈಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ತುರ್ತು ಹೃದಯ ಕಸಿ ಅನಿವಾರ್ಯವಾಗಿತ್ತು ಎಂದು ತಿಳಿದು ಬಂದಿದೆ. 

ನೇಪಾಳಿ ನಾಗರಿಕೆಯಾಗಿರುವ ಕಾರಣ ಚಿಕಿತ್ಸೆಗೆ ವಿಶೇಷ ವೈದ್ಯಕೀಯ ವಿನಾಯಿತಿ ನೀಡುವಂತೆ ಹೈಕೋರ್ಟ್‌ನಿಂದ ಅನುಮತಿ ಪಡೆಯಲಾಗಿತ್ತು. ಹೊಂದಾಣಿಕೆಯ ದಾನಿ ದೊರಕಿದ ಬಳಿಕ ಹೃದಯ ಕಸಿಗೆ ಕಾನೂನುಬದ್ಧ ಅವಕಾಶ ಲಭಿಸಿತು.

ಕೊಲ್ಲಂ ಜಿಲ್ಲೆಯ ಚಿರಕ್ಕರ ಮೂಲದ 46 ವರ್ಷದ ವ್ಯಕ್ತಿಯೊಬ್ಬರು ಡಿಸೆಂಬರ್ 21ರಂದು ರಸ್ತೆ ಅಪಘಾತದ ಬಳಿಕ ಮೆದುಳು ನಿಷ್ಕ್ರಿಯತೆಯಿಂದ ಮೃತಪಟ್ಟಿದ್ದರು. ಅವರ ಕುಟುಂಬದ ಒಪ್ಪಿಗೆಯೊಂದಿಗೆ ಬಹು ಅಂಗಾಂಗ ದಾನ ನಡೆಯಿತು. ಹೃದಯದ ಜೊತೆಗೆ ಮೂತ್ರಪಿಂಡಗಳು, ಯಕೃತ್ತು ಹಾಗೂ ಕಾರ್ನಿಯಾಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಲಾಯಿತು. ಇದೇ ವೇಳೆ ಕೇರಳದಲ್ಲಿ ಮೊದಲ ಬಾರಿಗೆ ಚರ್ಮದಾನವೂ ನೆರವೇರಿದ್ದು, ಅದನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಚರ್ಮ ಬ್ಯಾಂಕ್‌ಗೆ ಕಳುಹಿಸಲಾಗಿದೆ.

ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಶಾಹಿರ್ಷಾ ಅವರ ಪ್ರಕಾರ, ಹೃದಯ ಕಸಿಗೆ ಆಸ್ಪತ್ರೆ ಕಳೆದ ಒಂದು ವರ್ಷದಿಂದ ಸಿದ್ಧತೆ ನಡೆಸುತ್ತಿತ್ತು. ಡಾ. ಜಾರ್ಜ್ ವಾಲೌರನ್, ಡಾ. ಜಿಯೋ ಪಾಲ್, ಡಾ. ರಾಹುಲ್, ಡಾ. ಪಾಲ್ ಹಾಗೂ ಡಾ. ವಿಜಯೋ ಅವರನ್ನು ಒಳಗೊಂಡ ವಿಶೇಷ ವೈದ್ಯಕೀಯ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ, ತುರ್ತು ಅಂಗಾಂಗ ಸಾಗಣೆಯ ಸಮನ್ವಯ ಹಾಗೂ ವೈದ್ಯಕೀಯ ತಂಡದ ನಿಪುಣತೆ ಈ ಸಾಧನೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದ್ದು, ಈ ಘಟನೆ ದೇಶದ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0