ಕುಶಾಲನಗರ : ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ನಾಟಕ ಪ್ರದರ್ಶನ: ಅರೆಭಾಷೆ ಬಳಕೆಗೆ ಹಿಂಜರಿಕೆ ಮಾಡದೆ ಅಭಿಮಾನದಿಂದ ಬಳಕೆ ಮಾಡಬೇಕು : ಸದಾನಂದ ಮಾವಜಿ

Dec 16, 2025 - 12:43
Dec 16, 2025 - 13:37
 0  411
ಕುಶಾಲನಗರ : ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ನಾಟಕ ಪ್ರದರ್ಶನ:   ಅರೆಭಾಷೆ ಬಳಕೆಗೆ ಹಿಂಜರಿಕೆ ಮಾಡದೆ ಅಭಿಮಾನದಿಂದ ಬಳಕೆ ಮಾಡಬೇಕು : ಸದಾನಂದ ಮಾವಜಿ

ಕುಶಾಲನಗರ : ಪ್ರತಿಯೊಬ್ಬ ಗೌಡ ಸಮುದಾಯ ಬಾಂಧವರು ಅರೆಭಾಷೆ ಬಳಕೆ ಮಾಡಲು ಹಿಂಜರಿಕೆ ಮಾಡದೆ ಅಭಿಮಾನದಿಂದ ಬಳಸಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಲಹೆ ನೀಡಿದರು.

 ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ರೈತ ಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರೆಭಾಷೆ ದಿನಾಚರಣೆ 2025 ಮತ್ತು ಅರೆಭಾಷೆ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 ಆಡುಭಾಷೆಯಾಗಿದ್ದ ಅರೆಭಾಷೆ ವ್ಯವಹಾರ ಭಾಷೆಯಾಗಿ ಬೆಳೆದು ರಾಜ್ಯ ಮನ್ನಣೆಗಳಿಸಿದೆ. 2012 ಡಿ.15 ರಂದು ಅಂದಿನ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದಗೌಡ ಅವರ ವಿಶೇಷ ಪ್ರಯತ್ನದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಯಿತು. ಇದೀಗ ಅರೆಭಾಷೆ ದಿನಾಚರಣೆಗೆ 15 ವರ್ಷ ತುಂಬಿರುವುದು ಸಂತೋಷ ತಂದಿದೆ ಎಂದರು.

ಸಭೆ,ಸಮಾರಂಭಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಪರಿಚಯ ಮಾಡಿಕೊಡಬೇಕು.ಮುಂದಿನ ದಿನಗಳಲ್ಲಿ ಅರೆಭಾಷೆ ದಿನಾಚರಣೆಯನ್ನು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಮೂಕಾಂಬಿಕಾ ವಿದ್ಯಾಸಂಸ್ಥೆ ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಮಾತನಾಡಿ, ಭಾಷೆ ಒಂದು ಜನಾಂಗ ಇರುವಿಕೆಯನ್ನು ‌ತೋರಿಸುತ್ತದೆ.ಸಂಸ್ಕೃತಿ ಮತ್ತು ಭಾಷೆ ಒಂದೇ ನಾಣ್ಯದ ಎರಡು ಮುಖಗಳು.ಭಾಷೆ ಬಳಕೆ ಮಾಡದಿದ್ದಲ್ಲಿ ನಶಿಸಿ ಹೋಗುವ ಸಾಧ್ಯತೆ ಇದೆ.ಭಾಷೆ ಬೆಳೆಸಲು ನಾವು ಎಲ್ಲಿ ದಾರಿ ತಪ್ಪಿದ್ದೇವೆ ಎಂಬುದನ್ನು ಚಿಂತನೆ ನಡೆಸಬೇಕು.ಭಾಷೆ ಬಗ್ಗೆ ಯಾರು ಹಿಂಜರಿಕೆ ಪಡದೆ ನಮ್ಮ ಭಾಷೆ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ಬಳಸಬೇಕು ಎಂದು ಸಲಹೆ ನೀಡಿದರು.

 ಕೊಡಗು ಗೌಡ ಸಮಾಜಗಳ ಒಕ್ಕೂಟದ ಆನಂದ್ ಕರಂದ್ಲಾಜೆ ಮಾತನಾಡಿ,ಅರೆಭಾಷೆ ಪುರಾತನ ಭಾಷೆಯಾಗಿದ್ದು, ಗೌಡರ ಮುಖ್ಯಭಾಷೆಯಾಗಿದೆ.ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಹರಡಿರುವ ಗೌಡ ಸಮುದಾಯ ಸಂಸ್ಕೃತಿ, ಭಾಷೆ ವಿಭಿನ್ನವಾಗಿರುವ ಜೊತೆಗೆ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದರು. ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ಬಳಿಕ ಅರೆಭಾಷೆಗೆ ಬಲ ಸಿಕ್ಕಿತು. ನಮ್ಮ ಜನಾಂಗದ ವೇಷಭೂಷಣ ಕಾಪಿ ಮಾಡಬಹುದು ಆದರೆ ಭಾಷೆಯನ್ನು ಕಾಪಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಅರೆಭಾಷೆ ಆಸ್ಮಿತೆ ಉಳಿಯಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಅರೆಭಾಷೆ ಮಾತನಾಡಬೇಕು ಎಂದರು. ಇಲ್ಲಿನ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಕೊಡಗು ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ,ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಸ್.ಜೆ ದೇವದಾಸ್,ಕಾರ್ಯದರ್ಶಿ ನಾಗರಾಜು,ಸವಿತಾ ಸಮಾಜದ ಅಧ್ಯಕ್ಷ ಕೆ. ಎಸ್ ದೊರೇಶ,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಮೋಹನ್, ಚಂದ್ರಶೇಖರ್ ಪೇರಲು,ಲತಾ ಕುದುಪಜೆ ಮತ್ತಿತರರು ಪಾಲ್ಗೊಂಡಿದ್ದರು.ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಸ್ವಾಗತಿಸಿದರು.ಕರಂದ್ಲಾಜೆ ಕಲಾಆನಂದ್ ಮತ್ತು ಚೆರಿಯಮನೆ ಋಷಿ ಹರೀಶ್ ನಿರೂಪಿಸಿದರು. ಲೋಕೇಶ್ ಊರುಬೈಲ್ ನಿರ್ದೇಶನದ ಅಪ್ಪ ಅರೆಭಾಷೆ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಶೋಕ್, ಕಾಶೀ,ಬೈಮನ ಬೋಜಮ್ಮ,ಬೀನನಂಜಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0