ಮಡಿಕೇರಿ: ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ನಗರದಲ್ಲಿ ಭವ್ಯ ಮೆರವಣಿಗೆ

ಮಡಿಕೇರಿ: ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ನಗರದಲ್ಲಿ ಭವ್ಯ ಮೆರವಣಿಗೆ

ಮಡಿಕೇರಿ: ಶ್ರೀಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ 37ನೇ ವರ್ಷದ ಶ್ರೀ ರಾಮೋತ್ಸವದ ಪ್ರಯುಕ್ತ ಇಂದು ಸಂಜೆ ಶ್ರೀ ರಾಮೋತ್ಸವದ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದಿಂದ ನಗರದಲ್ಲಿ ಭವ್ಯ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ ವಿಶೇಷ ಪಲ್ಲಕ್ಕಿಯಲ್ಲಿ ಆಸೀನಗೊಂಡ ಶ್ರೀ ಕೋದಂಡ ರಾಮ ಪರಿವಾರ ಉತ್ಸವ ಮೂರ್ತಿಯನ್ನು ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಿತು. ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತಕ್ಕೆ ಸಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ವಿವಿಧ ಆಕರ್ಷಕ ನೃತ್ಯ, ಚಂಡೆ ವಾದ್ಯ ಸಹಿತ ಸಾಂಸ್ಕೃತಿಕ ಕಲಾತಂಡಗಳು, ಕಲಶ ಹೊತ್ತ ಮಹಿಳೆಯರು, ವಿವಿಧ ತಂಡಗಳಿಂದ ಭಜನೆಯೊಂದಿಗೆ ಮೆರವಣಿಗೆ ನಡೆಯಿತು.

 ಮಹದೇವಪೇಟೆಯ ಬನ್ನಿ ಮಂಟಪದವರೆಗೆ ತೆರಳಿ ಅಲ್ಲಿಂದ ಶ್ರೀ ಕೋದಂಡ ರಾಮ ದೇವಾಲಯವನ್ನು ಸೇರಿದ್ದು, ರಾತ್ರಿ ದೇವಾಲಯದ ಆವರಣದಲ್ಲಿ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಮಾ.೨೭ ರಂದು ಬೆಳಿಗ್ಗೆ ೮ ಗಂಟೆಯಿಂದ ದೇವಾಲಯದ ಆವರಣದಲ್ಲಿ ಕ್ಷೇತ್ರ ತಂತ್ರಿಯವರಾದ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಮತ್ತು ದೇವಾಲಯದ ಪುನರ್ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಗಳು ಜರುಗಲಿವೆ. ಆ ದಿನ ಗುರು ಗಣಪತಿ ಹೋಮ, ಮಹಾ ಸಂಕಲ್ಪ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ತತ್ವಕಲಾ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ, ಕಲಶಾಭಿಷೇಕ, ಕುಂಭಾಭಿಷೇಕ ನಡೆಯಲಿದೆ.

 ಅಲ್ಲದೆ ದೇವಾಲಯ ಆವರಣದಲ್ಲಿ ದೇವ ನರ್ತನ ಕಾರ್ಯಕ್ರಮವಿದೆ. ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ, ತೀರ್ಥ ಪ್ರಸಾದ ನಡೆಯಲಿದೆ. ಆ ನಂತರ ದೇವಾಲಯ ಆವರಣದಲ್ಲಿ ಕೋಸಂಬರಿ- ಪಾನಕ ವಿತರಣೆಯಾಗಲಿದೆ. ಅಲ್ಲದೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಜೆ ೫ ರಿಂದ ೭ ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಸಲಾಗುತ್ತದೆ. ಬಳಿಕ ಸಂಜೆ ೭ ಗಂಟೆಗೆ ಬೆಂಗಳೂರು ಹಲಸೂರುವಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಶ್ರೀ ಬೋಧಸ್ವರೂಪಾನಂದಜಿ ಮಹಾರಾಜ್ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆೆ. ನಂತರ ರಾತ್ರಿ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಸುಮಾರು ೫ ಸಾವಿರ ಭಕ್ತರು ಸೇರುವ ನಿರೀಕ್ಷೆ ಇದ್ದು, ವಿದ್ಯಾರ್ಥಿಗಳಿಗೆ ೧೦ನೇ ತರಗತಿ ಪರೀಕ್ಷೆ ನಡೆಯುತ್ತಿರುವ ಕಾರಣ ಮಾ.೨೮ ರಂದು ಸಂಜೆ ಗಾಂಧಿ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.