ಮಂಡ್ಯ: ಡಿಸಿ ಕಚೇರಿ ಎದುರೇ ರೈತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಮಂಡ್ಯ: ಜಮೀನು ವ್ಯಾಜ್ಯ ಬಗೆಹರಿಯದ ಹತಾಶೆಯಿಂದ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿ ಎದುರೇ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ (55) ಆತ್ಮಹತ್ಯೆಗೆ ಯತ್ನಿಸಿದ ರೈತ ಎಂದು ಗುರುತಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕಚೇರಿ ಓಡಾಟ ನಡೆಸುತ್ತಿದ್ದ ಅವರು, ನ್ಯಾಯ ದೊರೆಯದ ಬೇಸರದಿಂದ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಡಿಸಿ ಕಚೇರಿ ಎದುರಿನ ಭವ್ಯವನದಲ್ಲಿ ಬೆಳಗ್ಗೆ ಸುಮಾರು 10 ಗಂಟೆ ಸುಮಾರಿಗೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಮಂಜೇಗೌಡರನ್ನು ಅಲ್ಲಿ ಹಾದುಹೋಗುತ್ತಿದ್ದ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ನೀರು ಸುರಿದು ನಂದಿಸಿದ್ದಾರೆ. ಬಳಿಕ ತೀವ್ರ ಸುಟ್ಟ ಗಾಯಗಳಾಗಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರಂಭದಲ್ಲಿ “ವಿದ್ಯುತ್ ಶಾಕ್‌ನಿಂದ ಬೆಂಕಿ ಹೊತ್ತಿಕೊಂಡಿತು” ಎಂದು ಹೇಳಿದ್ದ ಮಂಜೇಗೌಡ, ನಂತರ ತಾವೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಗಿ ಪೊಲೀಸರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.