45 ಕೋಟಿ ರೂ ಹಗರಣ ; ಕೊಡಗಿನ ಆರೋಪಿ ಸೇರಿ 6 ಜನರ ಬಂಧನ

45 ಕೋಟಿ ರೂ ಹಗರಣ ; ಕೊಡಗಿನ ಆರೋಪಿ  ಸೇರಿ 6 ಜನರ ಬಂಧನ

ಕೋವರ್‌ ಕೊಲ್ಲಿ ಇಂದ್ರೇಶ್‌

 ಬೀದರ್: ಬೀದರ್‌ ನ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 45 ಕೋಟಿ ರೂ. ಬಹುಕೋಟಿ ಹಗರಣ ಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, ವಿವಿಯ ಮಾಜಿ ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್ , ಸಿಬ್ಬಂದಿಗಳಾದ ಮೃತ್ಯುಂಜಯ ಹಿರೇಮಠ, ಮಂಜುನಾಥ ರಾಮಗೊಂಡ ಹಾಗೂ ಕೊಡಗು ಮೂಲದ ಉದ್ಯಮಿ ಎಂ ಎಂ ಬೋಪಣ್ಣ ಎಂದು ಗುರುತಿಸಲಾಗಿದೆ.

ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಶ್ವ ವಿದ್ಯಾಲಯದಲ್ಲಿ 2018 ರಿಂದ 2022 ರ ರವರೆಗೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ಸೆಪ್ಟೆಂಬರ್‌ 10,2025 ರಂದು ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಸಿಬ್ಬಂದಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.

 ವಿಶ್ವವಿದ್ಯಾಲಯದ ಪ್ರೊಫೆಸರ್, ಇಂಜಿನಿಯರ್ಸ್ ಸೇರಿ ಸಿಬ್ಬಂದಿಗಳ ಮನೆ ಮೇಲೆ ಬೀದರ್‌ನಲ್ಲಿ ಒಟ್ಟು 25 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.ಬೀದರ್ ಅಲ್ಲದೆ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದಡಿಯಲ್ಲಿ 50 ಕ್ಕೂ ಹೆಚ್ಚು ಆರೋಪಿಗಳಿಗೆ ಸೇರಿದ್ದ ಬೆಂಗಳೂರು, ಉಡುಪಿ, ಚಿಕ್ಕಮಗಳೂರು ನಗರದಲ್ಲಿ ಒಟ್ಟು 67 ಕಡೆ 69 ತಂಡಗಳಿಂದ ಏಕಕಾಲದಲ್ಲಿ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನ ಜಾಲಾಡಿ ಸಾಕಷ್ಟು ದಾಖಲಾತಿಗಳನ್ನೂ ವಶಪಡಿಸಿಕೊಂಡಿದ್ದರು.

 ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖಾಸಗೀ ವ್ಯಾಪಾರಿಗಳೊಂದಿಗೆ ಶಾಮೀಲಾಗಿ ಪೀಠೋಪಕರಣ, ಸ್ಟೇಷನರಿ ಖರೀದಿಯಲ್ಲಿ ಭಾರೀ ಅಕ್ರಮ ಎಸಗಿದ್ದುದು ನಂತರದ ತನಿಖೆ ಹಾಗೂ ವಶಪಡಿಸಿಕೊಂಡ ದಾಖಲೆಗಳಿಂದ ಬಹಿರಂಗವಾಗಿತ್ತು. ವಿಶ್ವಿದ್ಯಾಲಯಕ್ಕೆ ವಿವಿಧ ದುಬಾರಿ ಬೆಲೆಯ ಪೀಠೋಪಕರಣಗಳು , ಸ್ಟೇಷನರಿ ವಸ್ತುಗಳನ್ನು ಒಂದಕ್ಕೆ ಮೂರು ಪಟ್ಟು ನಾಲ್ಕು ಪಟ್ಟು ಹೆಚ್ಚಿನ ದರದಂತೆ ಖರೀದಿ ಮಾಡಿರುವ ಬಿಲ್‌ ಗಳನ್ನು ಸಲ್ಲಿಸಿ ಸರ್ಕಾರದಿಂದ ಹಣ ಪಡೆಯಲಾಗಿತ್ತು.

ಆದರೆ ವಾಸ್ತವವಾಗಿ ಖರೀದಿ ಮಾಡಿದ್ದುದು ಕೇವಲ 2-3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳಾಗಿದ್ದು , ಖರೀದಿಯೇ ಮಾಡದೇ ಬರೀ ಕಾಗದದಲ್ಲಿ ಮಾತ್ರ ತೋರಿಸಿ 45 ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಳ್ಳಲಾಗಿತ್ತು. ಈ ಹಗರಣದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಎಂ ಎಂ ಬೋಪಣ್ಣ ಅವರು ಎರಡು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಿಶ್ವಿದ್ಯಾಲಯಕ್ಕೆ ಸರಬರಾಜು ಮಾಡಿರುವುದಾಗಿ ಬಿಲ್‌ ಸಲ್ಲಿಸಿ ಹಣ ಪಡೆದುಕೊಂಡಿದ್ದರು.

 ಆದರೆ ಲೋಕಾಯುಕ್ತ ಪೋಲೀಸರು ನಡೆಸಿದ ತನಿಖೆಯಲ್ಲಿ ತಾನು ಪಡೆದುಕೊಂಡಿದ್ದ ಹಣದಲ್ಲಿ ಶೇಕಡಾ 10 ರಷ್ಟು ಕಮಿಷನ್‌ ಮುರಿದುಕೊಂಡು ಉಳಿದ ಹಣವನ್ನು ಹಗರಣದ ಭಾಗೀದಾರರಿಗೆ ವಾಪಸ್‌ ನೀಡಿದ್ದುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೋಲೀಸರು ಮುಖ್ಯ ಆರೋಪಿ ಪ್ರೊಫೆಸರ್‌ ಹೆಚ್‌ ಡಿ ನಾರಾಯಣ ಸ್ವಾಮಿ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದರು. ಬಂಧಿತರನ್ನು ಇಂದು ಬೆಳಿಗ್ಗೆ ಲೋಕಾಯಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಣೇಶ್ವರ ಹಾಗೂ ಎಸ್ಪಿ ಸಿ ಮತ್ತು ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಇನ್ನುಳಿದಂತೆ ಎಸ್ಪಿ ಸಿದ್ದರಾಜು ಅವರ ಉಸ್ತುವಾರಿಯಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಹಾಗೂ ಅವರ ತಂಡ ಯಶಸ್ವಿಯಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.