ಕಾವೇರಿ ತವರಿಗೆ ಈ ಬಾರಿಯಾದರೂ ಒಲಿಯುತ್ತಾ ಮಂತ್ರಿ ಭಾಗ್ಯ!; ಶಾಸಕ ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ!
ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ,ಇದೀಗ ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆ ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಏತನ್ಮಧ್ಯೆ ರಾಜ್ಯದಲ್ಲಿ ಡಿಕೆಶಿ ಸಂಪುಟದಲ್ಲಿ ಸ್ಥಾನ ಪಡೆಯುವ ಸಚಿವರ ಬಗ್ಗೆ ಚರ್ಚೆಗಳು ನಡೆಯುತ್ತಿದೆ.ಹಳೆಯ 10 ರಿಂದ 15 ಮಂದಿ ಸಚಿವರಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಚರ್ಚೆ ನಡೆಸಿದ್ದಾರೆ.ಇದೀಗ ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನದ ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ ಕಾಂಗ್ರೆಸ್ ಯುವ ಶಾಸಕದ್ವಯರಾದ ಎಎಸ್ ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಗೆಲುವು ಸಾಧಿಸಿದ್ದರು.ಸಿದ್ದರಾಮಯ್ಯ ಅವರ ಮೊದಲ ಸಚಿವ ಸಂಪುಟದಲ್ಲಿ ಕೊಡಗಿಗೆ ಪ್ರತಿನಿತ್ಯ ಸಿಗಬಹುದೆಂದೇ ನಿರೀಕ್ಷಿಸಲಾಗಿತ್ತು.
ಆದರೆ ಮೊದಲ ಬಾರಿಗೆ ಗೆಲುವು ಸಾಧಿಸಿದ ಶಾಸಕರು ಎಂಬ ಕಾರಣಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.ನಂತರ ಎಎಸ್ ಪೊನ್ನಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಸಚಿವ ಸಂಪುಟ ಸ್ಥಾನಮಾನ ನೀಡಲಾಗಿತ್ತು.
ಸಂಭಾವ್ಯರ ಪಟ್ಟಿಯಲ್ಲಿ ಎಎಸ್ ಪೊನ್ನಣ್ಣ;
ರಾಜ್ಯದಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.ಮೊದಲ ಬಾರಿಗೆ ಗೆಲುವು ಸಾಧಿಸಿದ ಶಾಸಕರು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಬೀರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.ಡಿಕೆಶಿ ಸಂಪುಟದಲ್ಲಿ 15ಕ್ಕೂ ಹೆಚ್ಚು ಹೊಸ ಮುಖಗಳಿಗೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿ.ಇದರಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎಎಸ್ ಪೊನ್ನಣ್ಣ ಅವರ ಹೆಸರು ಕೂಡ ಸೇರಿ ಕೊಂಡಿದೆ.
ಕಳೆದ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಎಎಸ್ ಪೊನ್ನಣ್ಣ ಅವರು ಹೈಕಮಾಂಡ್ ಮಟ್ಟದಲ್ಲಿ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಂಡಿದ್ದಾರೆ.ಕಡಿಮೆ ಅವಧಿಯಲ್ಲಿ ಇಡೀ ರಾಜ್ಯ ರಾಜಕೀಯದಲ್ಲಿ ಎಎಸ್ ಪೊನ್ನಣ್ಣ ಅವರು ಅತ್ಯಂತ ಕ್ರಿಯಾಶೀಲ ಹಾಗೂ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಎಎಸ್ ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರ ಸಂಕಷ್ಟದ ಸಮಯದಲ್ಲಿ ಗಟ್ಟಿಯಾಗಿ ಅವರೊಂದಿಗೆ ಬೆನ್ನುಲುಬಾಗಿ ನಿಂತು,ವಿಶ್ವಾಸಗಳಿಸಿಕೊಂಡಿದ್ದಾರೆ.ಇಡೀ ದೇಶದಲ್ಲಿ ಸುದ್ದಿಯಾಗಿದ್ದ ಮೂಡಾ ಹಗರಣದ ಪ್ರಕರಣದಲ್ಲಿ, ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದ ಆಪ್ತರೇ ಕೈಕೊಟ್ಟಾಗ ಕಾನೂನಿನ ಮೂಲಕ ನೆರವು ನೀಡಿ,ಎಲ್ಲಾ ರೀತಿಯಲ್ಲೂ ಸಿದ್ದರಾಮಯ್ಯ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಎಎಸ್ ಪೊನ್ನಣ್ಣ ಅವರು ನಿಂತುಕೊಂಡು,ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ನಡುವೆ ಅಧಿಕಾರ ಹಸ್ತಾಂತರ ಬಿಕ್ಕಟ್ಟು ಎದುರಾದಾಗ ಹೈಕಮಾಂಡ್ ನಿರ್ದೇಶದಂತೆ ಮಧ್ಯಸ್ಥಿಕೆ ವಹಿಸಿದ್ದರು.ರಾಜ್ಯ ರಾಜಕೀಯದಲ್ಲಿ ಸುದ್ದಿಯಾಗಿದ್ದ ಬ್ರೇಕ್ ಫಾಸ್ಟ್ ಮೀಟಿಂಗ್ ಉಸ್ತುವಾರಿ ಕೂಡ ಎಎಸ್ ಪೊನ್ನಣ್ಣ ಅವರು ವಹಿಸಿದ್ದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್,ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ,ಅಜಯ್ ಮಖಾನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಎಎಸ್ ಪೊನ್ನಣ್ಣ ಅವರು ಬೆಳೆಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಹೈಕಮಾಂಡ್ ಗೆ ಕೃತಜ್ಞತೆ ಸಲ್ಲಿಸಲು ದೆಹಲಿಗೆ ತೆರಳುವ ಸಂದರ್ಭದಲ್ಲಿ ಎಎಸ್ ಪೊನ್ನಣ್ಣ ಅವರು ಕೂಡ ಜೊತೆಗೆ ಇದ್ದರು.ಕಾಂಗ್ರೆಸ್ ಮೂಲಗಳ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಅವರು ತಮ್ಮ ಕೋಟಾದಲ್ಲಿ ಮಂತ್ರಿ ಸ್ಥಾನ ನೀಡಬೇಕಾದವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಈ ಪಟ್ಟಿಯಲ್ಲಿ ಎಎಸ್ ಪೊನ್ನಣ್ಣ ಅವರ ಹೆಸರು ಕೂಡ ಇದೆ ಎಂಬ ಮಾಹಿತಿ ವಿಶ್ವಾಸನೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಸಂಕಷ್ಟದ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರೊಂದಿಗೆ ನಿಂತಿದ್ದ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.ಎಎಸ್ ಪೊನ್ನಣ್ಣ ಅವರು ಡಿಕೆ ಶಿವಕುಮಾರ್ ಅವರೊಂದಿಗೆ ಕೂಡ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ.
ಡಿಕೆಶಿ ಮುಖ್ಯಮಂತ್ರಿ! ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನಿರೀಕ್ಷೆ;
ಡಿಕೆಶಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ಚರ್ಚೆಗಳು ಕೂಡ ಒಂದೆಡೆ ನಡೆಯುತ್ತಿದೆ.ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಬಿಕ್ಕಟ್ಟು ಎದುರಾದಾಗ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಡಾ.ಮಂತರ್ ಗೌಡ ಅವರು ಪರೋಕ್ಷವಾಗಿ ಬ್ಯಾಟ್ ಬೀಸಿದ್ದರು.ಡಿಕೆ ಶಿವಕುಮಾರ್ ಅವರು ತನ್ನ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಆಸಕ್ತಿ ತೋರಿದ್ದಾರೆ.ಒಂದು ವೇಳೆ ಶೇಕಡಾ 75% ರಷ್ಟು ಹೊಸಬರಿಗೆ ಅವಕಾಶ ನೀಡಿದಲ್ಲಿ ಡಾ.ಮಂತರ್ ಗೌಡ ಅವರಿಗೆ ಕೂಡ ಸಚಿವ ಸ್ಥಾನ ಸಿಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ಸಿಗದಿದ್ದರೂ ಕೂಡ ಪ್ರಬಲ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಗ್ಯಾರಂಟಿ.
ಪ್ರಬಲ ಜಿಲ್ಲೆಗಳು!ಜಾತಿವಾರು ಸಮೀಕರಣ ಈ ಬಾರಿಯೂ ಕೊಡಗಿಗೆ ಕೈ ತಪ್ಪುತ್ತಾ ಮಂತ್ರಿಗಿರಿ!
ಒಂದೆಡೆ ಕೊಡಗಿಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿದೆ.ಮತ್ತೊಂದೆಡೆ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ಕಾಂಗ್ರೆಸ್ ಸಚಿವ ಸಂಪುಟ ಪುನರ್ ರಚನೆ ವೇಳೆಯಲ್ಲಿ ಜಾತಿ ಸಮೀಕರಣ, ವೋಟ್ ಬ್ಯಾಕ್,ಪ್ರಬಲ ಜಿಲ್ಲೆಗಳ ಮನ್ನಣೆ ಇತ್ಯಾದಿ ವಿಷಯಗಳನ್ನು ಅಳೆದು-ತೂಗಿ ಸಚಿವ ನೀಡುವುದು ಮಾಮೂಲಿ.ಕೊಡಗು ಪುಟ್ಟ ಜಿಲ್ಲೆ.ಅದಲ್ಲದೇ ಬರೀ ಕೇವಲ ಎರಡು ಶಾಸಕರು ಮಾತ್ರ ಇರುವುದು.ಕಳೆದ ಬಿಜೆಪಿ ಸರ್ಕಾರದ ಹಾದಿಯಲ್ಲೇ ಕೊಡಗು ಜಿಲ್ಲೆಯನ್ನು ಕಾಂಗ್ರೆಸ್ ಸರ್ಕಾರ ಸಚಿವ ಸ್ಥಾನ ನೀಡದೆ ಕಡೆಗಣಿಸಿದರು ಅಚ್ಚರಿಯಿಲ್ಲ.ಕುಶಾಲನಗರ ಗಡಿದಾಟಿದರೆ ನಡೆಯುವ ರಾಜಕೀಯ ಕೆಲವೊಮ್ಮೆ ಯಾರ ಊಹೆಗೆ ನಿಲುಕದ ವಿಶ್ಲೇಷಣೆ.
ಜಾತಿವಾರು ಸಮೀಕರಣ,ಪ್ರಬಲ ಜಿಲ್ಲೆಗಳ ಶಾಸಕರ ಒತ್ತಡ ಮಧ್ಯೆ ಕೊಡಗಿಗೆ ಒಂದು ವೇಳೆ ಸಚಿವ ಸ್ಥಾನ ಕೈ ತಪ್ಪಬಹದು.ಕೊಡಗಿನ ಶಾಸಕರು ಮಂತ್ರಿಯಾಗಿ ದಶಕ ಕಳೆದಿದೆ.ಪಕ್ಷಾತೀತವಾಗಿ ಕೊಡಗಿನ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಇದೆ.ಎಸ್.ಎಂ ಕೃಷ್ಣ ಅವರು ತಮ್ಮ ಮಂತ್ರಿ ಮಂಡಲದಲ್ಲಿ ಕೊಡಗಿನ ಮೂವರಿಗೆ ಸಚಿವ ಸ್ಥಾನ ನೀಡಿದ್ದರು.ಡಿಕೆ ಶಿವಕುಮಾರ್ ಅವರು ತಮ್ಮ ಮಂತ್ರಿ ಮಂಡಲದಲ್ಲಿ ಕೊಡಗಿಗೆ ಪ್ರಾತಿನಿತ್ಯ ನೀಡುತ್ತಾರೋ ಎಂಬುದು ಕಾದುನೋಡಬೇಕಿದೆ.
