ಮನೆ ಮಾಲೀಕರ ಶ್ವಾನ ಹತ್ಯೆ: ಕೆಲಸದಾಕೆಯಿಂದ ಅಮಾನವೀಯ ಕೃತ್ಯ!
ಬೆಂಗಳೂರು: ಮನೆ ಮಾಲೀಕರ ಸಾಕು ಶ್ವಾನವನ್ನು ಕೆಲಸದಾಕೆಯೊಬ್ಬಳು ನೆಲಕ್ಕೆ ಬಡಿದು, ಕತ್ತು ಬಿಗಿದು ಅಮಾನವೀಯವಾಗಿ ಹತ್ಯೆಗೈದ ಘಟನೆ ನಗರದ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಇದೀಗ ಬೆಳಕಿಗೆ ಬಂದಿದ್ದು, ಶ್ವಾನ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮನೆ ಮಾಲೀಕರಾದ ರಾಶಿ ಪೂಜಾರಿ ಅವರ ಮನೆಯಲ್ಲಿ ಸಾಕಲಾಗುತ್ತಿದ್ದ ಗೂಫಿ ಎಂಬ ಶ್ವಾನವನ್ನು ನೋಡಿಕೊಳ್ಳಲು ಪುಷ್ಪಲತಾ ಎಂಬ ಮಹಿಳೆ ನೇಮಿತಳಾಗಿದ್ದಳು. ಅಕ್ಟೋಬರ್ 31ರಂದು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋದ ಪುಷ್ಪಲತಾ, ಲಿಫ್ಟ್‌ನೊಳಗೆ ಬಂದ ಕೂಡಲೇ ಶ್ವಾನವನ್ನು ನೆಲಕ್ಕೆ ಬಡಿದು, ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೈದಿರುವುದು ದೃಶ್ಯದಲ್ಲಿ ಸ್ಪಷ್ಟವಾಗಿದೆ.
ನಂತರ ನಾಯಿಯ ಮೃತದೇಹವನ್ನು ಎಳೆದುಕೊಂಡು ಬಂದು “ನಾಯಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ” ಎಂದು ಸುಳ್ಳು ಹೇಳಿದ್ದಾಳೆ ಎಂದು ರಾಶಿ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಅನುಮಾನಗೊಂಡ ಅವರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕೆಲಸದಾಕೆಯ ಕ್ರೂರ ಕೃತ್ಯ ಬಯಲಾಗಿದೆ.
ಘಟನೆ ಬೆಳಕಿಗೆ ಬಂದ ನಂತರ ರಾಶಿ ಪೂಜಾರಿ ಅವರು ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶ್ವಾನ ಪ್ರಿಯರು ಮತ್ತು ಪ್ರಾಣಿ ಹಕ್ಕು ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.
ದೂರಿನ ಮೇರೆಗೆ ಬಾಗಲೂರು ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿ ಪುಷ್ಪಲತಾಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.