ಮೈಸೂರು | ಸರಗೂರಿನಲ್ಲಿ ಮತ್ತೆ ಹುಲಿ ದಾಳಿ; ದನಗಾಹಿ ಸಾವು, ಗ್ರಾಮದಲ್ಲಿ ಆತಂಕ

ಮೈಸೂರು | ಸರಗೂರಿನಲ್ಲಿ ಮತ್ತೆ ಹುಲಿ ದಾಳಿ; ದನಗಾಹಿ ಸಾವು, ಗ್ರಾಮದಲ್ಲಿ ಆತಂಕ
Photo credit: TV09

ಮೈಸೂರು, ಅ.31: ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಹುಲಿ ದಾಳಿಯ ಆತಂಕ ಮತ್ತೊಮ್ಮೆ ತಲೆದೋರಿದೆ. ಕಾಡಂಚಿನ ಕುರ್ಣೇಗಾಲ ಗ್ರಾಮದ ಬಳಿ ಹಸು ಮೇಯಿಸುತ್ತಿದ್ದ ದನಗಾಹಿ ಮೇಲೆ ವ್ಯಾಘ್ರ ದಾಳಿ ನಡೆಸಿ ಕೊಂದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೃತನನ್ನು ನಿಂಗಯ್ಯ (65) ಎಂದು ಗುರುತಿಸಲಾಗಿದೆ. ಬೆಳಗ್ಗೆ ಹಸುಗಳನ್ನು ಮೇಯಿಸಲು ಹೋದ ನಿಂಗಯ್ಯ, ಕಾಡಂಚಿನ ಪ್ರದೇಶದಲ್ಲಿ ಹುಲಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರು ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದರೂ, ಆಗಾಗಲೇ ನಿಂಗಯ್ಯ ಸಾವನ್ನಪ್ಪಿದ್ದರು.

ಘಟನೆ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಲಿಯ ಪಾದದ ಚಿಹ್ನೆ ಪತ್ತೆಹಚ್ಚಲು ಹಾಗೂ ಅದರ ಚಲನೆ ಪತ್ತೆಹಚ್ಚುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಇದೇ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಕೆಲವೇ ದಿನಗಳ ಹಿಂದೆ ರೈತ ರಾಜಶೇಖರ್ ಹುಲಿ ದಾಳಿಗೆ ಬಲಿಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಾಣಹರಣ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ.

ಗ್ರಾಮಸ್ಥರು “ಹುಲಿ ದಾಳಿಗಳು ದಿನೇದಿನೇ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಹುಲಿಯನ್ನು ಹಿಡಿಯದೆ ಹೋದರೆ ಇನ್ನೂ ಅನಾಹುತಗಳು ಸಂಭವಿಸಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.