Kodagu

ಗೃಹಜ್ಯೋತಿ ಯೋಜನೆ ದಾಖಲೆ ಪರಿಷ್ಕರಣೆಗೆ ಅಗತ್ಯ ಮಾಹಿತಿ ಒದಗಿಸಿ: ಗೃಹಲಕ್ಷ್ಮಿ ಯೋಜನೆ ವದಂತಿಗಳಿಗೆ ಕಿವಿಗೊಡದಿರಿ: ಧರ್ಮಜ ಉತ್ತಪ್ಪ

admincoorgdaily

ಗೃಹಜ್ಯೋತಿ ಯೋಜನೆ ದಾಖಲೆ ಪರಿಷ್ಕರಣೆಗೆ ಅಗತ್ಯ ಮಾಹಿತಿ ಒದಗಿಸಿ: ಗೃಹಲಕ್ಷ್ಮಿ ಯೋಜನೆ ವದಂತಿಗಳಿಗೆ ಕಿವಿಗೊಡದಿರಿ: ಧರ್ಮಜ ಉತ್ತಪ್ಪ

ಮಡಿಕೇರಿ ಜು.10:-ಗೃಹಜ್ಯೋತಿ ಯೋಜನೆ ಸಂಬಂಧಿಸಿದಂತೆ ದಾಖಲೆ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳು ಕೇಳಿರುವ ಮಾಹಿತಿ ಒದಗಿಸುವಂತಾಗಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಹೇಳಿದ್ದಾರೆ.  

ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸರ್ಕಾರ ಅರ್ಹರಿಗೆ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಬೇಕು ಎಂಬುದು ಉದ್ದೇಶವಾಗಿದೆ. ಆದ್ದರಿಂದ ಮಾಹಿತಿ ಕೇಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಭಾವಚಿತ್ರ ಮತ್ತಿತರ ಮಾಹಿತಿ ಒದಗಿಸುವಂತಾಗಬೇಕು ಎಂದು ಧರ್ಮಜ ಉತ್ತಪ್ಪ ಅವರು ಕೋರಿದರು. 

ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಜೀವಂತ ಪ್ರಮಾಣ ಪತ್ರ ನೀಡಬೇಕೆಂದು ಸೈಬರ್ ಕೇಂದ್ರಗಳಿಗೆ ಓಡಾಡುತ್ತಿದ್ದು, ಇಂತಹ ಮಾಹಿತಿಗೆ ಕಿವಿಗೊಡಬಾರದು, ಯಾರೂ ಸಹ ಗಾಬರಿಗೆ ಒಳಗಾಗುವುದು ಬೇಡ ಎಂದು ಧರ್ಮಜ ಉತ್ತಪ್ಪ ಅವರು ಹೇಳಿದರು. 

      ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮರದ ಕೊಂಬೆಗಳು ಬೀಳುತ್ತಿವೆ. ಇವುಗಳನ್ನು ತೆರವುಗೊಳಿಸಬೇಕು ಎಂದು ಧರ್ಮಜ ಉತ್ತಪ್ಪ ಅವರು ನಿರ್ದೇಶನ ನೀಡಿದರು. 

      ಕಳೆದ ಮೂರು ನಾಲ್ಕು ದಿನದಲ್ಲಿ ದಕ್ಷಿಣ ಕೊಡಗಿನಲ್ಲಿ ಹೆಚ್ಚಿನ ಮಳೆಯಾಗಿದೆ. ಶ್ರೀಮಂಗಲ, ಬಿರುನಾಣಿ, ತೆರಾಲು, ಬಾಡಗಕೇರಿ, ಬಿ.ಶೆಟ್ಟಿಗೇರಿ, ಕುಟ್ಟಂದಿ, ಭಾಗಮಂಡಲ, ಶಾಂತಳ್ಳಿ, ಸೂರ್ಲಬ್ಬಿ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ವಿದ್ಯುತ್ ಕಂಬಗಳು ಸಹ ಬೀಳುತ್ತಿದ್ದು, 24 ಗಂಟೆಯೊಳಗೆ ಸರಿಪಡಿಸಿ ವಿದ್ಯುತ್ ಪೂರೈಸಬೇಕು ಎಂದು ಧರ್ಮಜ ಉತ್ತಪ್ಪ ಅವರು ಸೂಚಿಸಿದರು. 

       ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಅಣ್ಣಯ್ಯ ಅವರು ಗುಮ್ಮನಕೊಲ್ಲಿ ಬಳಿ 11 ಕೆ.ವಿ. ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವಂತೆ ಕಳೆದ ಆರು ತಿಂಗಳಿನಿಂದ ಮನವಿ ಮಾಡುತ್ತಾ ಬರಲಾಗಿದೆ. ಅಲ್ಲಿನ ಒಂದು ಮಗುವಿಗೆ ಮುಖ ಸುಟ್ಟು ಹೋಗಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದರು.

       ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಆ ಭಾಗದಲ್ಲಿ ತೊಂದರೆಯಾಗಿದೆ ಎಂದು ಅವರು ಗಮನ ಸೆಳೆದರು. ಈ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ಸೆಸ್ಕ್ ಇಇ ರಾಮಚಂದ್ರ ಅವರು ಹೇಳಿದರು. 

       ದಕ್ಷಿಣ ಕೊಡಗಿನ ಸುಮಾರು 513 ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ, ಗೃಹಜ್ಯೋತಿ ಯೋಜನೆ ಕಲ್ಪಿಸಲಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅವರು ಮಾಹಿತಿ ನೀಡಿದರು. 

       ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ ಅವರು ಹೊಸ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿನ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ಈ ರೀತಿ ಆಗದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರು. 

        ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಮಳೆಗಾಲ ಸಂದರ್ಭದಲ್ಲಿ ಸೆಸ್ಕ್ ಇಲಾಖೆಯವರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

        ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ನಾಸೀರ್ ಅವರು ಮಾತನಾಡಿ ಗೃಹಲಕ್ಷ್ಮಿ ಯೋಜನೆ ಸಂಬಂಧ ಹೆಸರು ನೋಂದಾಯಿಸಿಕೊಂಡಿರುವ ಫಲಾನುಭವಿಗಳಿಂದ ಜೀವಂತ ಪ್ರಮಾಣ ಪತ್ರ ಕಡ್ಡಾಯ ಮಾಡಿಸಬೇಕು ಎಂದು ಮಾಹಿತಿಗಳು ಕೇಳಿ ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರು ಗಾಬರಿಯಾಗದಂತೆ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು. 

        ಫಲಾನುಭವಿಗಳು ಸುಳ್ಳು ಮಾಹಿತಿಗಳಿಗೆ ಕಿವಿಗೊಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಅವರು ಕೋರಿದರು. 

       ಗೃಹಲಕ್ಷ್ಮಿ ಯೋಜನೆಯಡಿ ಮೇ ತಿಂಗಳವರೆಗೆ ಹಣ ಬಿಡುಗಡೆಯಾಗಿದ್ದು. ಸದ್ಯ 1,17,905 ಫಲಾನುಭವಿಗಳಿಗೆ ಹಣ ಪಾವತಿಯಾಗಲಿದೆ. ಇದುವರೆಗೆ ಶೇ.98 ರಷ್ಟು ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ ಎಂದರು. 

       ಅನ್ನಭಾಗ್ಯ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಬಡವರಿಗೆ ಆಹಾರ ತಲುಪಿಸಬೇಕು. ಎಪಿಎಲ್ ಕಾರ್ಡ್‍ಗಳನ್ನು ಬಿಪಿಎಲ್ ಕಾರ್ಡ್‍ಗೆ ವರ್ಗಾಯಿಸಬೇಕು ಎಂದು ತಿಳಿಸಿದರು. 

       ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಕಾಳಿಮಾಡ ಪ್ರಶಾಂತ್ ಅವರು ಮನೆ ಮನೆಗೆ ಆಹಾರ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ಮಾಡಬೇಕಿದೆ. ಆದರೆ ತಹಶೀಲ್ದಾರರೇ ಸ್ಥಳ ಪರಿಶೀಲಿಸಬೇಕು ಎಂದು ವರದಿ ನೀಡುತ್ತಿದ್ದಾರೆ. ಇದು ಸರಿಯಲ್ಲ. ಕೆಲವು ಕುಟುಂಬಗಳಲ್ಲಿ ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಗೊಂಡಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಕೋರಿದರು. 

        ಶ್ರೀಮಂಗಲ ವಿಎಸ್‍ಎಸ್‍ಎನ್ ನ್ಯಾಯಬೆಲೆ ಅಂಗಡಿಯಲ್ಲಿ 60 ಚೀಲ ಅಕ್ಕಿ ಉಳಿದಿದ್ದು, ಇದನ್ನು ಗ್ರಾಹಕರಿಗೆ ವಿತರಿಸಬೇಕು ಎಂದು ಸಲಹೆ ಮಾಡಿದರು. 

        ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಜಾನ್ಸನ್ ಅವರು ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ 900 ಪಡಿತರ ಕಾರ್ಡ್‍ಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದು, ಈ ಕಾರ್ಡ್‍ಗಳನ್ನು ಪುನರ್ ಪರಿಶೀಲಿಸಿ ಮುಂದುವರಿಸುವಂತಾಗಬೇಕು ಎಂದು ಅವರು ಹೇಳಿದರು. 

        ಎಪಿಎಲ್ ಕಾರ್ಡ್‍ಗಳು ಸಹ ದಾಖಲೆ ಉದ್ದೇಶಕ್ಕೆ ಬೇಕಿದ್ದು, ಈ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಡಿತರ ಕಾರ್ಡ್‍ಗಳನ್ನು ವಿತರಿಸುವಂತಾಗಬೇಕು ಎಂದು ಸಲಹೆ ಮಾಡಿದರು. 

        ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ನಾಸೀರ್ ಅವರು ವಿರಾಜಪೇಟೆ-ಗೋಣಿಕೊಪ್ಪ-ಮೈಸೂರು ಮಾರ್ಗಕ್ಕೆ ಬಸ್ಸು ಕಲ್ಪಿಸುವಂತೆ ಕೋರಲಾಗಿತ್ತು,. ಇದು ಕಾರ್ಯಗತಗೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ರಜೆ ದಿನಗಳಲ್ಲಿಯೂ ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗಿದೆ ಎಂದರು. 

        ಧರ್ಮಜ ಉತ್ತಪ್ಪ ಅವರು ಮಾತನಾಡಿ ಪೊನ್ನಂಪೇಟೆಯ ಹರಿಹರಕ್ಕೆ ಬಸ್ಸು ಕಲ್ಪಿಸಬೇಕು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

        ಮತ್ತೊಬ್ಬ ಸಮಿತಿ ಸದಸ್ಯರಾದ ವಿ.ಪಿ.ಶಶಿಧರ ಅವರು ಮಾತನಾಡಿ ಕೊಡಗು ಜಿಲ್ಲೆಗೆ ನಾಲ್ಕು ಹೊಸ ಬಸ್ಸುಗಳು ಬಂದಿದ್ದು, ಬೆಂಗಳೂರು-ಮಡಿಕೇರಿ ಮಾರ್ಗ ಸಂಚರಿಸುತ್ತವೆ ಎಂದು ಹೇಳಿದರು.

        ಗುಡ್ಡೆ ಹೊಸೂರು ಬಳಿ ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣವಾಗಿದೆ. ಎನ್‍ಒಸಿ ಸಹ ಕೊಡಿಸಲಾಗಿದೆ. ಇಂಧನ ಬಂಕ್ ಆದಲ್ಲಿ ಶೀಘ್ರ ಉದ್ಘಾಟಿಸಬಹುದಾಗಿದೆ ಎಂದರು. 

       ಯುವನಿಧಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಪ್ರಾಂಶುಪಾಲರ ಜೊತೆ ಚರ್ಚಿಸಿದ್ದಲ್ಲಿ ವಿದ್ಯಾರ್ಥಿಗಳ ಪಟ್ಟಿ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ಯುವನಿಧಿ ಯೋಜನೆಯ ಪ್ರಗತಿ ಸಾಧಿಸಬಹುದು ಎಂದು ಸಲಹೆ ಮಾಡಿದರು. 

         ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಕಾಂತರಾಜು ಅವರು ತಾಲ್ಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಏರ್ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.    

         ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯಲ್ಲಿ ಉದ್ಯೋಗಾಧಿಕಾರಿಗೆ ವಾಹನ ಇಲ್ಲದೆ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. 

         ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು. 

        ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ರಮಾ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಎಎವೈ 8,659, ಬಿಪಿಎಲ್ 97,159, ಎಪಿಎಲ್ 41902 ಒಟ್ಟು 1,47,720 ಪಡಿತರ ಚೀಟಿದಾರರು ಇದ್ದಾರೆ ಎಂದು ಮಾಹಿತಿ ನೀಡಿದರು. 

         ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್ ಅವರು ಮಾಹಿತಿ ನೀಡಿ ಜೂನ್-2026 ರ ಮಾಸಾಂತ್ಯಕ್ಕೆ 1935 ಪದವೀಧರ ಫಲಾನುಭವಿಗಳಿಗೆ ಮತ್ತು 30 ಡಿಪ್ಲೋಮಾ ಫಲಾನುಭವಿಗಳಿಗೆ ಒಟ್ಟು 1965 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.     

         ಗೃಹಜ್ಯೋತಿ ಯೋಜನೆಯಡಿ ಶೇ.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಮಚಂದ್ರ ಅವರು ಹೇಳಿದರು. ಸಮಿತಿ ಉಪಾಧ್ಯಕ್ಷರಾದ ಪಂಕಜ, ಸಂಜಯ್, ಸದಸ್ಯರಾದ ಮಂದ್ರೀರ ಮೋಹನ್ ದಾಸ್, ಬಶೀರ್, ಧನ್ಯ, ಇತರರು ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.