ಪುಲ್ವಾಮಾ ಹುತಾತ್ಮ ಯೋಧನ ಪುತ್ರ ರಾಹುಲ್ ಸೊರೆಂಗ್ ಹರಿಯಾಣ ಅಂಡರ್-19 ಕ್ರಿಕೆಟ್ ತಂಡಕ್ಕೆ ಆಯ್ಕೆ | ವೀರೇಂದ್ರ ಸೆಹ್ವಾಗ್ ಆಶ್ರಯದಲ್ಲಿ ಬೆಳೆದ ಪ್ರತಿಭಾವಂತ ಆಟಗಾರ
ಗುರುಗ್ರಾಮ: 2019ರ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕ ವಿಜಯ್ ಸೊರೆಂಗ್ ಅವರ ಪುತ್ರ ರಾಹುಲ್ ಸೊರೆಂಗ್ ಹರಿಯಾಣ ಅಂಡರ್-19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಗುರುಗ್ರಾಮ್‌ನ ಸೆಹ್ವಾಗ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ರಾಹುಲ್ ಸೊರೆಂಗ್, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಆಶ್ರಯದಲ್ಲಿ ಶಿಕ್ಷಣ ಮತ್ತು ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಪುಲ್ವಾಮಾ ದಾಳಿಯ ನಂತರ ಸೆಹ್ವಾಗ್ ಅವರು ಈ ಹುತಾತ್ಮನ ಪುತ್ರನ ಶಿಕ್ಷಣ ಮತ್ತು ಕ್ರೀಡಾ ಭವಿಷ್ಯದ ಹೊಣೆ ಹೊತ್ತಿದ್ದರು.
ಹರಿಯಾಣದ ಅಂಡರ್-19 ತಂಡಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
“ಪುಲ್ವಾಮಾ ದಾಳಿಯಲ್ಲಿ ರಾಹುಲ್ ನ ತಂದೆ ಹುತಾತ್ಮರಾದ ನಂತರ, ಅವರಿಗೆ ನೆರವಾಗಲು ನನಗೆ ಅವಕಾಶ ಸಿಕ್ಕಿತು. ಇಂದು ಅವರು ತಮ್ಮ ಪ್ರಯಾಣದ ಮಹತ್ವದ ಹಂತ ತಲುಪಿರುವುದು ಹೆಮ್ಮೆಯ ವಿಚಾರ,” ಎಂದು ತಿಳಿಸಿದ್ದಾರೆ.
ರಾಹುಲ್ ಅವರು ಈ ಹಿಂದೆ ಹರಿಯಾಣದ ಅಂಡರ್-14 ಮತ್ತು ಅಂಡರ್-16 ತಂಡಗಳಲ್ಲಿ ಸಹ ಆಡಿದ್ದಾರೆ. ಪ್ರಸ್ತುತ ಪುದುಚೇರಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಹರಿಯಾಣವನ್ನು ಪ್ರತಿನಿಧಿಸಲಿದ್ದಾರೆ.
ಶಿಸ್ತು, ಪರಿಶ್ರಮ ಮತ್ತು ಸಮರ್ಪಣೆ ಅವರ ಯಶಸ್ಸಿನ ಮೂಲವಾಗಿದ್ದು, ಭಾರತೀಯ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವುದು ಮುಂದಿನ ಗುರಿ ಎಂದು ರಾಹುಲ್ ಹೇಳಿದ್ದಾರೆ.