ಕಳ್ಳತನದ ಶಂಕೆ: ವಲಸೆ ಕಾರ್ಮಿಕನ ಥಳಿಸಿ ಗುಂಪು ಹತ್ಯೆ : ಕೇರಳದ ಪಾಲಕ್ಕಾಡ್‌ನಲ್ಲಿ ಅಮಾನವೀಯ ಘಟನೆ; ಐವರು ಬಂಧನ

ಕಳ್ಳತನದ ಶಂಕೆ: ವಲಸೆ ಕಾರ್ಮಿಕನ ಥಳಿಸಿ ಗುಂಪು ಹತ್ಯೆ  : ಕೇರಳದ ಪಾಲಕ್ಕಾಡ್‌ನಲ್ಲಿ ಅಮಾನವೀಯ ಘಟನೆ; ಐವರು ಬಂಧನ

ಕೊಚ್ಚಿ: ಕಳ್ಳತನದ ಶಂಕೆ ವ್ಯಕ್ತಪಡಿಸಿ 31 ವರ್ಷದ ವಲಸೆ ಕಾರ್ಮಿಕನೊಬ್ಬನನ್ನು ಸ್ಥಳೀಯರ ಗುಂಪು ಥಳಿಸಿ ಹತ್ಯೆ ನಡೆಸಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಸಮೀಪ ನಡೆದಿದೆ.

ಮೃತನನ್ನು ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದೆ. ಅವರು ಕಾಂಜಿಕೋಡ್‌ನಲ್ಲಿ ವಾಸಿಸುತ್ತಿದ್ದು, ಉದ್ಯೋಗ ಹುಡುಕಿಕೊಂಡು ನಾಲ್ಕು ದಿನಗಳ ಹಿಂದೆ ಕೇರಳಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಮಧ್ಯಾಹ್ನ ವಲಯಾರ್ ಬಳಿಯ ಕಿಝಕೆಯಟ್ಟಪ್ಪಲ್ಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಹೇಳಿಕೆ ಪ್ರಕಾರ, ಭಯಾರ್ ಕೆಲ ಮನೆಗಳ ಬಳಿ ಕಾಣಿಸಿಕೊಂಡಿದ್ದರಿಂದ ಕಳ್ಳತನದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಉಂಟಾದ ಗಲಾಟೆಯಲ್ಲಿ ಅವರನ್ನು ಗುಂಪು ಹಲ್ಲೆಗೆ ಒಳಪಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಭಯಾರ್ ರಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದಿದ್ದು, ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆಬದಿಯಲ್ಲೇ ಬಿದ್ದಿದ್ದರು. ಬಳಿಕ ಸಂಜೆ 4.30ರ ವೇಳೆಗೆ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರಂಭದಲ್ಲಿ ಮೃತನು ಜಾರ್ಖಂಡ್ ಮೂಲದವನೆಂದು ಹೇಳಿದ್ದ ಪೊಲೀಸರು, ನಂತರ ಛತ್ತೀಸ್‌ಗಢದ ನಿವಾಸಿ ಎಂದು ಸ್ಪಷ್ಟಪಡಿಸಿದ್ದಾರೆ.

ಮೃತನ ಸಂಬಂಧಿಕರ ಪ್ರಕಾರ, ಭಯಾರ್‌ಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ಸೂಕ್ತ ಉದ್ಯೋಗ ಸಿಗದ ಕಾರಣ ಮನೆಗೆ ಮರಳಲು ಯೋಚಿಸುತ್ತಿದ್ದರು. ದಾರಿ ತಪ್ಪಿ ಆ ಪ್ರದೇಶಕ್ಕೆ ಬಂದಿರಬಹುದು ಎಂದು ಅವರು ತಿಳಿಸಿದ್ದಾರೆ. ಭಯಾರ್‌ಗೆ 8 ಮತ್ತು 10 ವರ್ಷದ ಇಬ್ಬರು ಮಕ್ಕಳಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಭಯಾರ್ ಮೇಲೆ ಕೋಲಿನಿಂದ ಕ್ರೂರವಾಗಿ ಹಲ್ಲೆ ನಡೆಸಿರುವುದು ಬಹಿರಂಗವಾಗಿದೆ. ತಲೆಯಿಂದ ಕಾಲಿನವರೆಗೆ 80ಕ್ಕೂ ಹೆಚ್ಚು ಗಾಯಗಳು ಕಂಡುಬಂದಿದ್ದು, ತೀವ್ರ ಹಲ್ಲೆ ಹಾಗೂ ತಲೆಗೆ ಆದ ಗಾಯಗಳಿಂದ ಉಂಟಾದ ಅತಿಯಾದ ಮತ್ತು ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣವೆಂದು ವರದಿ ದೃಢಪಡಿಸಿದೆ. ಮದ್ಯಪಾನ ಮಾಡಿದ್ದರೂ ಅವರು ಯಾವುದೇ ಕಳ್ಳತನ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುಮಾರು 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ಘಟನೆಯ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಜ್ಯ ಮಾನವ ಹಕ್ಕುಗಳ ಆಯೋಗವು ತನಿಖೆಗೆ ಆದೇಶಿಸಿ, ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದೆ. 

ಈ ಘಟನೆ 2018ರಲ್ಲಿ ಅಟ್ಟಪ್ಪಾಡಿಯಲ್ಲಿ ನಡೆದ ಬುಡಕಟ್ಟು ಯುವಕ ಮಧು ಗುಂಪು ಹತ್ಯೆಯನ್ನು ನೆನಪಿಸುವಂತಿದ್ದು, ಕಳ್ಳತನದ ಶಂಕೆ ನೆಪದಲ್ಲಿ ನಡೆಯುವ ಗುಂಪು ಹಿಂಸಾಚಾರದ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.