ಚೆನ್ನೈ: ಎರಡು ಬಸ್ಸುಗಳ ಮುಖಾಮುಖಿ ಡಿಕ್ಕಿ: ಕನಿಷ್ಠ ಆರು ಸಾವು, 28 ಮಂದಿಗೆ ಗಾಯ

Nov 24, 2025 - 16:08
 0  950
ಚೆನ್ನೈ: ಎರಡು ಬಸ್ಸುಗಳ ಮುಖಾಮುಖಿ ಡಿಕ್ಕಿ: ಕನಿಷ್ಠ ಆರು ಸಾವು, 28 ಮಂದಿಗೆ ಗಾಯ
Photo credit: TV09

ಚೆನ್ನೈ, ನ. 24: ತಮಿಳುನಾಡಿನ ತೇಂಕಾಸಿ ಜಿಲ್ಲೆಯ ಅಚ್ಚಂಪಟ್ಟಿ ಸಮೀಪ ಭೀಕರ ರಸ್ತೆ ದುರಂತ ಸಂಭವಿಸಿದ್ದು, ಎರಡು ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಮದುರೈನಿಂದ ಸೆಂಕೊಟ್ಟೈಗೆ ಬರುತ್ತಿದ್ದ ಬಸ್ಸು ಹಾಗೂ ತೇಂಕಾಸಿಯಿಂದ ಕೋವಿಲ್‌ಪಟ್ಟಿಗೆ ತೆರಳುತ್ತಿದ್ದ ಮತ್ತೊಂದು ಬಸ್ಸು ತೇಂಕಾಸಿ–ಮದುರೈ ರಸ್ತೆಯ ಇಡೈಯಕ್ಕಲ್‌ನ ದುರೈಸಾಮಿಪುರಂ ಬಳಿ ಪರಸ್ಪರ ಢಿಕ್ಕಿ ಹೊಡೆದಿವೆ. ಅಪಘಾತದ ತೀವ್ರತೆಗೆ ಎರಡೂ ಬಸ್ ಗಳ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ಕೆಲವು ಕಾಲ ತೊಂದರೆ ಉಂಟಾಯಿತು. ಎರಡೂ ಬಸ್ಸುಗಳಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಪಘಾತದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು. ಆಂಬುಲೆನ್ಸ್‌ಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ತೇಂಕಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ತೇಂಕಾಸಿ ಹಾಗೂ ತಿರುನೆಲ್ವೇಲಿ ಜಿಲ್ಲೆಗಳಲ್ಲಿ ನಿರಂತರ ಭಾರೀ ಮಳೆಯಾಗುತ್ತಿದ್ದು, ಅನೇಕ ರಸ್ತೆ ಮಾರ್ಗಗಳು ಜಲಾವೃತಗೊಂಡಿವೆ. ಇದರಿಂದ ಗಾಯಾಳುಗಳ ಸಾಗಣೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.  

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0