ಮಡಿಕೇರಿ ನಗರದ ನಾಲ್ಕು ಭಾಗಗಳಲ್ಲಿ ಫೆ.7 ರಂದು ವಿರಾಟ ಹಿಂದೂ ಸಂಗಮ
ಮಡಿಕೇರಿ: ಮಡಿಕೇರಿ ನಗರದ ನಾಲ್ಕು ಭಾಗಗಳಲ್ಲಿ ಫೆ.೭ ರಂದು ಶನಿವಾರ ಮಧ್ಯಾಹ್ನ ೨ ಗಂಟೆಗೆ ವಿರಾಟ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕಾರೇರ ಕವನ್ ತಿಳಿಸಿದ್ದಾರೆ.
ಮಾತೃಭೂಮಿ, ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯ ರಕ್ಷಣೆ ಹಾಗೂ ಸಂಸ್ಕೃತಿಯ ಪುನರುತ್ಥಾನ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದೂ ಸಂಘಟಿತರಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ ಮತ್ತು ಮಾತೃಭೂಮಿಯ ರಕ್ಷಣೆಯಾಗುತ್ತದೆ. ಈ ಮಹತ್ವದ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ ನೂರು ವರ್ಷಗಳಿಂದ ಕಾರ್ಯ ಮಾಡುತ್ತಾ ಬರುತ್ತಿದೆ ಆರ್‌ಎಸ್‌ಎಸ್ ಇಂದು ನೂರರ ಸಂಭ್ರಮದಲ್ಲಿದೆ.
ಸಂಘ ಶತಾಳ್ಮೆಯ ಹಿನ್ನೆಲೆಯಲ್ಲಿ ೨೦೨೫ರ ವಿಜಯದಶಮಿಯಿಂದ ೨೬ರ ವಿಜಯದಶಮಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಸಂಘ ಆಯೋಜಿಸಿಕೊಂಡು ಬರುತ್ತಿದೆ ಇದರ ಒಂದು ಭಾಗವಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮಿತಿ ಜಿಲ್ಲಾ ಸಂಯೋಜಕ ದಿನೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೧೦೦ಕ್ಕೂ ಅಧಿಕ ಕಡೆಗಳಲ್ಲಿ ಹಿಂದೂಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಮಡಿಕೇರಿ ನಗರದ ಗೌಡ ಸಮಾಜ, ಶ್ರೀ ಮುತ್ತಪ್ಪ ದೇವಸ್ಥಾನ, ಕಾನ್ವೆಂಟ್ ಜಂಕ್ಷನ್ ಆಟದ ಮೈದಾನ ಮತ್ತು ರೋಟರಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಳಿಕ ಚೌಕ್ ವೃತ್ತಕ್ಕೆ, ಆಗಮಿಸಿ ಅಲ್ಲಿ ಒಂದುಗೂಡಿ ೪ ಗಂಟೆಗೆ ಬೃಹತ್ ಶೋಭಾಯಾತ್ರೆಯ ಮೂಲಕ ಖಾಸಗಿ ಬಸ್ ನಿಲ್ದಾಣ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ವಿರಾಟ ಹಿಂದೂ ಸಂಗಮ ನಡೆಯಲಿದೆ. ಗಾಂಧಿ ಮೈದಾನದ ವೇದಿಕೆಯಲ್ಲಿ ಗಣ್ಯರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಡಿಕೇರಿ ನಗರದ ಸಮಸ್ತ ಹಿಂದೂ ಸಮಾಜ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಕೆ.ಎಸ್.ರಮೇಶ್, ಬಿ.ಕೆ.ಜಗದೀಶ್, ಸಂತೋಷ್, ಚೇತನ್ ಇದ್ದರು.