ಜಮೀನಿನಲ್ಲಿ ತೋಳದ ದಾಳಿ : ನಾಲ್ವರು ರೈತರಿಗೆ ಗಂಭೀರ ಗಾಯ

ಜಮೀನಿನಲ್ಲಿ ತೋಳದ ದಾಳಿ : ನಾಲ್ವರು ರೈತರಿಗೆ ಗಂಭೀರ ಗಾಯ

ಬೀದರ್, ನ.1: ಔರಾದ್‌ ತಾಲೂಕಿನ ಮೂರು ಗ್ರಾಮಗಳಲ್ಲಿ ಬುಧವಾರ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಮೂವರು ರೈತ ಮಹಿಳೆಯರು ಹಾಗೂ ಮನೆಗೆ ಮರಳುತ್ತಿದ್ದ ಒಬ್ಬನ ಮೇಲೆ ತೋಳವೊಂದು ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಆಲೂರ (ಬಿ) ಗ್ರಾಮದ ರುಕ್ಕಿಣ ಬಾಯಿ ವಿಠಲ ಮೇತ್ರೆ, ಜೀರ್ಗಾ (ಬಿ) ಗ್ರಾಮದ ಮಂಗಲಾ ಶರಣಯ್ಯ ಸ್ವಾಮಿ, ಅದೇ ಗ್ರಾಮದ ರೇವಪ್ಪ ಪ್ರಭು ಬಂಬೂಳಗೆ (15) ಹಾಗೂ ಜೋಜನಾ ಗ್ರಾಮದ ಲಾಲಮ್ಮ ತುಕಾರಾಮ ಕಾಂಬ್ಳೆ ಗಾಯಾಳುಗಳು ಎಂದು ಗುರುತಿಸಲಾಗಿದೆ. ನಾಲ್ವರಿಗೂ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣ ಬೀದರ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಬೆಳಗ್ಗೆ ಹೊತ್ತಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರುಕ್ಕಿಣ ಬಾಯಿ ಮತ್ತು ಲಾಲಮ್ಮ ಅವರ ಮೇಲೆ ತೋಳ ಹಿಂಬದಿಯಿಂದ ದಾಳಿ ನಡೆಸಿದೆ. ಇವರ ತಲೆ ಹಾಗೂ ಬೆನ್ನಿನ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹೊಲದಲ್ಲಿ ಕೆಲಸ ಮುಗಿಸಿ ಮನೆ ಕಡೆ ನಡೆದುಕೊಂಡು ಬರುತ್ತಿದ್ದ ಮಂಗಲಾ ಮೇಲೂ ತೋಳ ದಾಳಿ ನಡೆಸಿತ್ತು. ಆಕೆಯ ಚೀರಾಟ ಕೇಳಿ ಮುಂದೆ ಅಲ್ಲೇ ಪಕ್ಕದಲ್ಲಿದ್ದ ಗಂಡ ಶರಣಯ್ಯ ಸ್ವಾಮಿ ತಕ್ಷಣ ಧೈರ್ಯ ತೋರಿಸಿ ತೋಳವನ್ನು ಓಡಿಸಿ ಹೆಂಡತಿಯ ಪ್ರಾಣ ಉಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಜೆ ವೇಳೆಗೆ ಜೀರ್ಗಾ (ಬಿ) ಗ್ರಾಮದ ಬಾಲಕ ರೇವಪ್ಪನ ಮೇಲೂ ತೋಳ ದಾಳಿ ನಡೆಸಿದೆ. ಆತನಿಗೆ ಗಂಭೀರ ಗಾಯಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ನಂತರ ಸಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೋಳದ ಓಡಾಟ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.