ಮಹಿಳಾ ವಿಶ್ವಕಪ್ | ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಭಾರತ ಫೈನಲ್‌ಗೆ ಜೆಮಿಮಾ ರೊಡ್ರಿಗಸ್ ಅಜೇಯ 127*
ಮುಂಬೈ, ಅ.30: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಗುರುವಾರ ಭಾರತ ಮಹಿಳಾ ತಂಡವು ಅದ್ಭುತ ಜಯ ಸಾಧಿಸಿದೆ. ರೋಚಕ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ, ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ.
ನವೀ ಮುಂಬೈಯ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪೈಪೋಟಿಯಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲೇ ಸ್ಫೋಟಕ ಆಟ ತೋರಿದ ಆಸ್ಟ್ರೇಲಿಯಾ ತಂಡವು 49.5 ಓವರ್‌ಗಳಲ್ಲಿ 338 ರನ್‌ಗಳಿಸಿ ಆಲೌಟ್ ಆಯಿತು. ಭಾರತದ ಬೌಲರ್‌ಗಳು ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಗಳಿಸಿ ತಂಡಕ್ಕೆ ಆಸರೆಯಾದರು.
ಭಾರೀ ಗುರಿ ಎದುರಿಸಿದ್ದ ಭಾರತ ತಂಡವು ದೃಢತೆಯ ಆಟ ತೋರಿಸಿ, 9 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತು. ಜೆಮಿಮಾ ರೊಡ್ರಿಗಸ್ ಆಕರ್ಷಕ ಅಜೇಯ ಶತಕ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.
ಈ ಗೆಲುವಿನೊಂದಿಗೆ ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದಿದ್ದ ಆಸ್ಟ್ರೇಲಿಯಾದ ಓಟಕ್ಕೆ ಭಾರತದ ಮಹಿಳಾ ತಂಡ ಬ್ರೇಕ್ ಹಾಕಿದ್ದು, ಅಭಿಮಾನಿಗಳಲ್ಲಿ ಸಂಭ್ರಮದ ಅಲೆ ಉಂಟಾಗಿದೆ. ಭಾರತ ಈಗ ವಿಶ್ವಕಪ್ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುನ್ನಡೆದಿದೆ.