ನಾಪೋಕ್ಲು ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಣೆ: ಅಂಬೇಡ್ಕರ್ ವಸತಿ ಶಾಲೆ ಆಟದ ಮೈದಾನ ನಿರ್ಮಾಣಕ್ಕೆ ಕ್ರಮ: ಎ.ಎಸ್.ಪೊನ್ನಣ್ಣ

ಮಡಿಕೇರಿ:-ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಮ್ಮ 51 ನೇ ವರ್ಷದ ಹುಟ್ಟು ಹಬ್ಬವನ್ನು ನಾಪೋಕ್ಲುವಿನ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂಭ್ರಮ, ಸಡಗರ ಹಾಗೂ ಸಂತಸದಿಂದ ಬುಧವಾರ ಆಚರಿಸಿಕೊಂಡರು. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ನಾಪೋಕ್ಲುವಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಶಾಸಕರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡಿದ್ದು ಎದ್ದು ಕಾಣುವಂತಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಇಷ್ಟೊಂದು ಶಿಸ್ತಿನಿಂದ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಶಾಲೆಯಲ್ಲಿ ಓದಲು ಅವಕಾಶ ಸಿಕ್ಕಿರುವುದು ತಮಗೆ ಅದೃಷ್ಟವೇ ಸರಿ ಎಂದು ನುಡಿದರು. ಇಲ್ಲಿನ ಉತ್ತಮ ವಾತಾವರಣ, ಪರಿಸರ ಚೆನ್ನಾಗಿದ್ದು, ಓದುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ 1 ನೇ ತರಗತಿಯಿಂದ ಪಿಯುಸಿವರೆಗೆ ಶಾಲೆಯಲ್ಲಿ ಓದಿದ್ದೇನೆ. ಕಾನೂನು ಪದವಿಯನ್ನು ಸರ್ಕಾರಿ ಕಾಲೇಜಿನಲ್ಲಿ ಕಲಿತಿದ್ದೇನೆ. ಆ ನಿಟ್ಟಿನಲ್ಲಿ ಲಭ್ಯವಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಹೆಚ್ಚಿನ ವಿದ್ಯಾರ್ಥಿಗಳು ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಟದ ಮೈದಾನವನ್ನು ಖಂಡಿತ ನಿರ್ಮಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
‘ವಿದ್ಯಾರ್ಥಿಗಳಲ್ಲಿ ಮುಂದಾಲೋಚನೆ ಹಾಗೂ ದೂರದೃಷ್ಟಿ ಇರಬೇಕು. ಪೋಷಕರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಬದುಕು ಬದಲಾಯಿಸಲು ವಿಫುಲ ಅವಕಾಶಗಳಿದ್ದು, ಭವಿಷ್ಯ ರೂಪಿಸಿಕೊಳ್ಳುವತ್ತ ಯೋಚಿಸಬೇಕು. ಅವರವರ ಭವಿಷ್ಯ ಅವರವರ ಕೈಯಲ್ಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಕಿವಿಮಾತು ಹೇಳಿದರು.’
‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸು ಗಳಿಸುತ್ತಾರೆ. ಪ್ರಮುಖವಾಗಿ ಕೆಲವೊಂದು ಕೊರತೆ ಮತ್ತು ಹಸಿವು ಇದ್ದಲ್ಲಿ ಮೇಲೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.’ ಸಾಧಿಸುವ ಛಲ ಇದ್ದಲ್ಲಿ ಬದುಕನ್ನು ಹಸನು ಮಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸದಾ ಯೋಚಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.
ಎ.ಎಸ್.ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತೀರ ಧರ್ಮಜ ಉತ್ತಪ್ಪ, ನಾಪೋಕ್ಲು ಗ್ರಾ.ಪಂ.ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷರಾದ ಶಶಿ ಮಂದಣ್ಣ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ನೀತ, ಪಿಡಿಒ ಚೋಂದಕ್ಕಿ, ಪ್ರಮುಖರು ಇದ್ದರು.
ಬಳಿಕ ಎ.ಎಸ್.ಪೊನ್ನಣ್ಣ ಅವರು ಬೇತು ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಿ ಹುಟ್ಟುಹಬ್ಬ ಆಚರಿಸಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು.