ಕುಶಾಲನಗರ: ಶರಣ ಸಾಹಿತ್ಯ ಪರಿಷತ್ತಿನಿಂದ ಬಸವನಹಳ್ಳಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಕುಶಾಲನಗರ : ಹನ್ನೆರಡನೇ ಶತಮಾನದಲ್ಲಿ ಬೇರು ಬಿಟ್ಟಿದ್ದ ಮೇಲು ಕೀಳು, ವರ್ಣ ಬೇಧ, ವರ್ಗ ಬೇಧ, ಅಸಮಾನತೆ, ಬಡವ - ಬಲ್ಲಿದ,ಜಾತಿ ಪದ್ಧತಿಯ ನಿವಾರಣೆಯ ಭಾಗವಾಗಿ ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರನ್ನು ನೇಮಿಸುವ ಮೂಲಕ ಬಸವಣ್ಣನವರ ಬಳಿ ಬರುವ ಎಲ್ಲರೂ ಹಡಪದ ಅಪ್ಪಣ್ಣ ನವರ ಮೂಲಕವೇ ಭೇಟಿಯಾಗಬೇಕೆಂಬ ಆಶಯಕ್ಕೆ ಅನುಗುಣವಾಗಿ ಸತ್ಯ ಶುದ್ದ ಕಾಯಕ ಪ್ರಜ್ಞೆಯ ಹಡಪದ ಅಪ್ಪಣ್ಣ 114 ಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು ಎಂದು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕೆಳ ಜಾತಿಯವರನ್ನು ಕೀಳಾಗಿ ಕಾಣುತ್ತಾ ಮೂಢನಂಬಿಕೆ ಹಾಗೂ ಶೋಷಣೆಯನ್ನು ಬಿತ್ತುವ ಪುರೋಹಿತ ಶಾಹಿಗಳ ವಿರುದ್ಧ ಸಮರ ಸಾರಿದವರು ಅಪ್ಪಣ್ಣ.ವೃತ್ತಿಯಲ್ಲಿ ಕ್ಷೌರಿಕರಾದರೂ ಕೂಡ ನಡೆ ನುಡಿಗಳಲ್ಲಿ ಒಂದಾಗುವ ಮೂಲಕ ಸತ್ಯ ಶುದ್ದ ಕಾಯಕದಲ್ಲಿ ನಿರತರಾಗುತ್ತಿದ್ದ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ನಿಕಟವರ್ತಿಗಳಾಗಿದ್ದ ಬಗ್ಗೆ ಸವಿವರವಾಗಿ ಅವರ ಜೀವನ ಚರಿತ್ರೆಯನ್ನು ಮಹೇಂದ್ರಕುಮಾರ್ ಮಕ್ಕಳಿಗೆ ವಚನಗಳೊಂದಿಗೆ ವಿವರಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಧಾರ್ಮಿಕ ಪ್ರಭುತ್ವ ವಿರೋಧಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಹೆಗ್ಗಳಿಕೆ ಬಸವಣ್ಣನ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ನವರದ್ದಾಗಿದೆ.
ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ, ಸತ್ಯಕ್ಕ, ಮುಕ್ತಾಯಕ್ಕಾ, ಅಕ್ಕಮಹಾದೇವಿ, ನೀಲಾಂಬಿಕೆ, ಸೂಳೆ ಸಂಕವ್ವೆ ಮೊದಲಾದ ಶಿವಶರಣರು ಪ್ರಾಚೀನ ಋಷಿಗಳ ಸಿದ್ಧಾಂತವಾದ ದೇಹವೇ ದೇವಾಲಯ ಹಾಗೂ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಸಾರಿದ ಸತ್ಪುರುಷರು ಎಂದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ಕಾಲೇಜಿನ ಪಿಯು ಉಪನ್ಯಾಸಕ ಕೆ.ಆರ್.ರಮೇಶ್ ಹಾಗೂ ಶಿವಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ಅರಿತರೆ ಅವರ ವ್ಯಕ್ತಿತ್ವಕ್ಕೆ ಹೊಳಪು ಬರುತ್ತದೆ. ವಚನ ಸಾಹಿತ್ಯದ ಜೊತೆಗೆ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಅಬ್ದುಲ್ ಕಲಾಂ ಮೊದಲಾದ ಮಹಾ ಪುರುಷರ ಜೀವನ ಚರಿತ್ರೆಗಳನ್ನು ಅಭ್ಯಸಿಸುವ ಮೂಲಕ ಮೇರು ಗುಣಗಳನ್ನು ಮೈಗೂಡಿಸಿಕೊಳ್ಳಲು ಕರೆಕೊಟ್ಟರು.ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ವಸತಿ ಶಾಲೆಯ ಮೇಲ್ಬಿಚಾರಕ ಪ್ರವೀಣ್ ಇದ್ದರು.ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.