ಕೊಡಗು ವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ: ಸೋಲನ್ನು ಎದುರಿಸುವ ಧೈರ್ಯವೇ ನಿಜವಾದ ಯಶಸ್ಸು - ಎಂ.ಎ.ನಿರಂಜನ್

ಮಡಿಕೇರಿ : ಶಿಕ್ಷಣದ ಗುರಿ ಕೇವಲ ಯಶಸ್ಸನ್ನು ಸಾಧಿಸುವುದಲ್ಲ, ಜೀವನದಲ್ಲಿ ಎದುರಾಗುವ ಸೋಲುಗಳನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಸುವುದೂ ಶಿಕ್ಷಣದ ಧ್ಯೇಯವಾಗಿದೆ ಎಂದು ಹಿರಿಯ ವಕೀಲ ಎಂ.ಎಂ. ನಿರಂಜನ್ ಹೇಳಿದ್ದಾರೆ.ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಪದಗ್ರಹಣ ಸಮಾರಂಭ'ದಲ್ಲಿ, ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ, ಮೌಲ್ಯಗಳನ್ನು ಮೈಗೂಡಿಸಿಕೊಂಡ ಸಹಾನುಭೂತಿಯುಳ್ಳ ಮನುಷ್ಯರನ್ನಾಗಿ ರೂಪಿಸುವುದು ಪೋಷಕರು ಮತ್ತು ಶಿಕ್ಷಕರ ಪ್ರಮುಖ ಕರ್ತವ್ಯ," ಎಂದು ಅವರು ಹೇಳಿದರು.
ಇಂದಿನ ಸಮಾಜದಲ್ಲಿನ ಸೂಕ್ಷ್ಮತೆಯ ಕೊರತೆಯ ಬಗ್ಗೆ ಮಾತನಾಡಿದ ನಿರಂಜನ್, ಹಿಂದಿನ ದಿನಗಳಲ್ಲಿ ಅಪಘಾತ ಸಂಭವಿಸಿದಾಗ ತತ್ ಕ್ಷಣ ಜನರು ಸಹಾಯ ಮಾಡಲು ಧಾವಿಸುತ್ತಿದ್ದರು, ಆದರೆ ಇಂದು ಘಟನೆ ನಡೆದ ಕೂಡಲೇ ಮೊಬೈಲ್ ತೆಗೆದು ವಿಡಿಯೋ ಮಾಡುವ ಮನಸ್ಥಿತಿ ಹೆಚ್ಚಾಗಿದೆ. ಕಾನೂನಿನ ಭಯ ಕಡಿಮೆಯಾಗುತ್ತಿರುವುದು ಈ ರೀತಿಯ ಅಮಾನವೀಯ ವರ್ತನೆಗೆ ಕಾರಣ," ಎಂದು ವಿಷಾದಿಸಿದರು.
ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯ ಬಗ್ಗೆ ಎಚ್ಚರಿಸಿದ ಅವರು, "ಮೊಬೈಲ್ ಫೋನ್ ಯುವಜನರ ಮತ್ತು ಮಕ್ಕಳ ಕೈಯಲ್ಲಿರುವ ಬಾಂಬ್‌ನಂತೆ ಆಗಿದೆ. ಅದು ನಮ್ಮ ಕುಟುಂಬ ಸಂಬಂಧಗಳನ್ನು ಹಾಳುಮಾಡುತ್ತಿದೆ. ಹಿಂದಿನ ದಿನಗಳಲ್ಲಿ ರಜಾ ಸಿಕ್ಕಿದಾಗ ಮಕ್ಕಳು ಅಜ್ಜಿ-ತಾತನ ಮನೆಗೆ ಹೋಗಿ ಸಂಭ್ರಮಿಸುತ್ತಿದ್ದರು. ಆದರೆ ಇಂದು, ಕುಟುಂಬದ ಪ್ರತಿಯೊಬ್ಬರೂ ತಮ್ಮ ತಮ್ಮ ಫೋನ್‌ಗಳ ಬಳಕೆಯಿಂದ ವಾಟ್ಸಾಪ್ ಸಂದೇಶಗಳ ಮೂಲಕವೇ ಸಂವಹನ ನಡೆಸುವಂತಾಗಿದೆ. ಇದು ವಾಸ್ತವ ಮತ್ತು ತಿಳುವಳಿಕೆಯ ಕೊರತೆಗೆ ಕಾರಣವಾಗಿದೆ," ಎಂದು ಹೇಳಿದರು.ದೃಢಸಂಕಲ್ಪ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸಲು, ನಿರಂಜನ್ ಪರ್ವತಾರೋಹಿ ಅರುಣಿಮಾ ಸಿನ್ಹಾ ಅವರ ಜೀವನಗಾಥೆಯನ್ನು ಉದಾಹರಣೆಯಾಗಿ ನೀಡಿದರು.
"ಚಲಿಸುತ್ತಿರುವ ರೈಲಿನಿಂದ ಹೊರಗೆ ತಳ್ಳಲ್ಪಟ್ಟು ತಮ್ಮ ಕಾಲನ್ನು ಕಳೆದುಕೊಂಡರೂ, ಅರುಣಿಮಾ ಸಿನ್ಹಾ ಅವರು ಧೃತಿಗೆಡಲಿಲ್ಲ. ತಮ್ಮ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ 2013 ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವಿಶ್ವದ ಮೊದಲ ವಿಶೇಷ ಚೇತನ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಜೀವನವು ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಶ್ರೇಷ್ಠ ನಿದರ್ಶನವಾಗಿದೆ," ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಯಶಸ್ಸು ಮತ್ತು ಬೆಳವಣಿಗೆಯು ಯಾವಾಗಲೂ ವಿನಮ್ರತೆ, ಮತ್ತು ದೃಢನಿರ್ಧಾರದಿಂದ ಕೂಡಿರಬೇಕು. ಸ್ಪಷ್ಟವಾದ ಗುರಿ ಮತ್ತು ಕನಸನ್ನು ಇಟ್ಟುಕೊಂಡು ಶ್ರಮಿಸಿ," ಎಂದು ಮಕ್ಕಳಿಗೆ ಹಿತವಚನ ಹೇಳಿದರು. .
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಸುಮಿತ್ರ ಕೆಎಸ್, ಆಡಳಿತ ನಿರ್ವಹಣಾ ಅಧಿಕಾರಿ ರವಿ ಪಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಪೋಷಕರು ಪಾಲ್ಗೊಂಡಿದ್ದರು. ನೂತನವಾಗಿ ಆಯ್ಕೆಯಾದ ಶಾಲಾ ನಾಯಕರಿಗೆ ಇದೇ ಸಂದಭ೯ ಪ್ರಮಾಣ ವಚನ ಬೋಧಿಸಿ, ಅವರಿಗೆ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು.