ಪೊನ್ನಂಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ

ಪೊನ್ನಂಪೇಟೆ :ತಾಲೂಕು ಕೇಂದ್ರವಾದ ಪೊನ್ನಂಪೇಟೆಯ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ವಾಹನ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ. ಪಟ್ಟಣದ ಜೂನಿಯರ್ ಕಾಲೇಜು ಬಳಿಯಿಂದ ರಾಮಕೃಷ್ಣ ಶಾರದಾಶ್ರಮದವರೆಗೂ ವಾಹನಗಳ ದಟ್ಟಣೆಯಿಂದಾಗಿ ದೂರದ ಪ್ರದೇಶಗಳಿಗೆ ತೆರಳುವವರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ರಸ್ತೆಯ ಒಂದು ಬದಿಯಲ್ಲಿ ಕೆನರಾ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಕಟ್ಟಡಗಳಿದ್ದು, ಮತ್ತೊಂದು ಬದಿಯಲ್ಲಿ ವ್ಯಾಪಾರ ಮಳಿಗೆಗಳಿವೆ. ಇದರಿಂದಾಗಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ತಲೆದೋರಲು ಕಾರಣವೆನ್ನಲಾಗಿದೆ. ಹುಣಸೂರಿನಿಂದ ಗೋಣಿಕೊಪ್ಪ ಮಾರ್ಗವಾಗಿ ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಮೂಲಕ ಕೇರಳ ರಾಜ್ಯಕ್ಕೆ ತೆರಳುವ ವಾಹನಗಳು ಪೊನ್ನಂಪೇಟೆ ಪಟ್ಟಣಕ್ಕಾಗಿಯೇ ಹಾದು ಹೋಗಬೇಕಿದರುವುದರಿಂದ ವಾಹನಗಳ ದಟ್ಟಣೆ ಮಿತಿಮೀರಲು ಕಾರಣವಾಗಿದೆ. ಜತೆಗೆ ಪ್ರವಾಸಿತಾಣ ಇರ್ಪು ಜಲಪಾತ, ಕೆಕೆಆರ್ ಟೀ ಎಸ್ಟೇಟ್ ಹಾಗೂ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಇರ್ಪು ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವವರು ಇದೇ ಮಾರ್ಗವಾಗಿ ತೆರಳಬೇಕಿರುವುದು ವಾಹನಗಳ ದಟ್ಟಣೆ ಮಿತಿಮೀರಲು ಕಾರಣವೆನ್ನಲಾಗಿದ್ದು, ಪೊಲೀಸ್ ಸಿಬ್ಬಂದಿಗಳ ಕೊರತೆಯ ನಡುವೆಯೂ ಒಂದೆರಡು ಸಿಬ್ಬಂದಿಗಳು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸಿ, ನಿಯಮ ಪಾಲನೆ ಮಾಡದೆ ಇರುವುದು ಪೊನ್ನಂಪೇಟೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಪೊಲೀಸರು ವಾಹನಗಳ ನಿಲುಗಡೆ ಫಲಕವನ್ನು ಅಳವಡಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ಹಾಗೂ ಚಾಲಕರಿಗೆ ಪೊಲೀಸರು ಹಲವು ಬಾರಿ ದಂಡ ವಿಧಿಸಿದ್ದರೂ ಕೂಡ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರೆತ್ತಿಲ್ಲ. ಗೋಣಿಕೊಪ್ಪಲಿನಲ್ಲಿ ಈ ಹಿಂದೆ ಮಿತಿಮೀರಿದ ಟ್ರಾಫಿಕ್ ಸಮಸ್ಯೆಯಿಂದ ವಾಹನಗಳ ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದರು. ಇದೀಗ ಗೋಣಿಕೊಪ್ಪಲಿನಲ್ಲಿ ಟ್ರಾಫಿಕ್ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿದಿದ್ದು, ಇದೀಗ ತಾಲೂಕು ಕೇಂದ್ರ ಪೊನ್ನಂಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ.
ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ